ಮಂಡ್ಯ: ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ತನ್ನ ತಾಯಿಯನ್ನು ನಿಂದಿಸಿದ ಎಂದು ಕೋಪದ ಕೈಗೆ ಬುದ್ದಿಕೊಟ್ಟು ವೃದ್ಧನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಚಿಕ್ಕವೀರಯ್ಯ (72) ಹತ್ಯಯಾದ ವೃದ್ಧರು. ಇವರನ್ನು ಅದೇ ಗ್ರಾಮದ ಮೋಹನ್ (44) ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಘಟನೆ ನಂತರ ಆರೋಪಿ ಪರಾರಿಯಾಗಿದ್ದಾನೆ.
ಚಿಕ್ಕವೀರಯ್ಯ ಮತ್ತು ಮಹೇಶ ಅವರ ಮನೆಗಳು ಅಕ್ಕಪಕ್ಕದಲ್ಲಿದ್ದು, ಈ ಕುಟುಂಬಗಳ ನಡುವೆ ಆಗಾಗ್ಗೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಗಳು ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಅದೇ ರೀತಿ ಬುಧವಾರ ರಾತ್ರಿ ಚಿಕ್ಕವೀರಯ್ಯ ಜಗಳ ಮಾಡಿಕೊಂಡು ಮಹೇಶನ ತಾಯಿಯನ್ನು ನಿಂದಿಸಿದ್ದಾನೆ. ಈ ವಿಚಾರವನ್ನು ಮನೆಗೆ ಬಂದ ಮಗ ಮಹೇಶನಿಗೆ ತಾಯಿ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಆತ ಚಿಕ್ಕವೀರಯ್ಯನ ಮನೆಗೆ ತೆರಳಿ ಚಾಕುವಿನಿಂದ ಇರಿದಿದ್ದಾನೆ. ಘಟನೆಯಿಂದಾಗಿ ಕುಸಿದುಬಿದ್ದ ವೃದ್ಧನನ್ನು ಆತನ ಕುಟುಂಬದವರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷ ಮಹೇಶ್ ಮತ್ತು ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.