ಬೆಂಗಳೂರು: ಪದೇಪದೆ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ ಬೈಕ್ ಸವಾರನನ್ನು ಪೊಲೀಸರು ಹಿಡಿದು ಭಾರಿ ದಂಡ ಹಾಕಿರುವ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿದೆ.
ಅರುಣ್ಕುಮಾರ್ ಪೊಲೀಸರಿಗೆ ಸಿಕ್ಕಿಬಿದ್ದ ಬೈಕ್ ಸವಾರ. ಈತನ ದಂಡದ ರಶೀದಿ ನೋಡಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ಬರೋಬ್ಬರಿ 77 ಬಾರಿ ನಿಯಮ ಉಲ್ಲಂಘಿಸಿ ಸಂಚಾರ ಮಾಡಿರುವ ಪರಿಣಾಮ ಆಸಾಮಿಯ ದಂಡದ ಮೊತ್ತ 42,500 ರೂ. ಆಗಿದೆ.
ದಂಡ ಪಾವತಿಸದೇ ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿದ್ದ ಈತನನ್ನು ಸಂಚಾರ ಪೊಲೀಸರು ಹಿಡಿದಿದ್ದಾರೆ. ಅಲ್ಲದೇ, ಆತನಿಗೆ 42,500 ರೂ. ದಂಡ ವಿಧಿಸಿದ್ದು, ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.
ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಸಂಚಾರ ಸೇರಿ 77 ಕೇಸ್ಗಳು ಆತನ ಬೈಕ್ ಮೇಲೆ ದಾಖಲಾಗಿವೆ. ಆದರೆ, ಈತ ದಂಡದ ರಶೀದಿ ಪಡೆದು ಬೈಕ್ಅನ್ನು ಪೊಲೀಸರ ವಶಕ್ಕೆ ನೀಡಿ ಹೋಗಿದ್ದಾನೆ. ಈತ ಸೆಕೆಂಡ್ಹ್ಯಾಂಡ್ ಬೈಕ್ ಖರೀದಿಸಿದ್ದು, 20ಸಾವಿರದಿಂದ 30 ಸಾವಿರ ರೂ. ಬೆಲೆ ಬಾಳಲಿದೆ. ಆದರೆ ದಂಡದ ಮೊತ್ತ 42.5 ಸಾವಿರ ಆಗಿರುವುದರಿಂದ ಬೈಕ್ ಬಿಡಿಸಿಕೊಳ್ಳಲು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.