ಬೆಂಗಳೂರು: ಈ ಬಾರಿ ಸರಳ ದೀಪಾವಳಿ ಆಚರಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ರಾಸಾಯನಿಕಯುಕ್ತ ಪಟಾಕಿ ನಿಷೇಧಿಸಿ ಈ ಬಾರಿ ಸರಳ ದೀಪಾವಳಿ ಮಾಡಬೇಕು. ಈ ವರ್ಷ ಯಾರೂ ಪಟಾಕಿ ಸಿಡಿಸಬಾರದೆಂದು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುವೆ ವೇಳೆ ಸುಧಾಕರ್ ಹೇಳಿದರು.
ಆರೋಗ್ಯದ ದೃಷ್ಟಿಯಿಂದ ಪಟಾಕಿ ನಿಷೇಧ ಮಾಡಲಾಗಿದೆ.ಈ ಸಂಬಂಧ ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.ಈ ವರದಿಯ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸಲಾಗಿದೆ ಎಂದರು.
ಕದ್ದು ಮುಚ್ಚಿ ಪಟಾಕಿ ಸಿಡಿಸುವವರ ಮೇಲೂ ನಿಗಾ ವಹಿಸಲಾಗುವುದು. ಕದ್ದು ಮುಚ್ಚಿ ಪಟಾಕಿ ಸಿಡಿಸುವುದನ್ನು ತಡೆಯಲು ನಾಳೆ ಚರ್ಚಿಸಿ ನಿಯಮ ರೂಪಿಸಲಾಗುವುದು. ಪಟಾಕಿ ನಿಷೇಧಕ್ಕೆ ಜನರು ಸಹಕರಿಸಬೇಕು ಎಂದು ತಿಳಿಸಿದರು.
‘ಉಪಚುನಾವಣೆ ನಡೆದ ಎರಡು ಕ್ಷೇತ್ರದಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕು ಅಂತ ತಜ್ಞರ ಸಮಿತಿ ವರದಿ ನೀಡಿದೆ. ಅದೇ ರೀತಿ ಗ್ರಾಮ ಪಂಚಾಯಿತಿ ಚುನಾವಣೆ ಸಹ ಮುಂದೂಡಲು ವರದಿ ನೀಡಿದ್ದಾರೆ ಎಂದರು..
ಪಟಾಕಿಯಿಂದ ಶ್ವಾಸಕೋಶದ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಕಾರಣದಿಂದ ತಜ್ಞರು ಪಟಾಕಿ ಬೇಡ ಎಂದಿದ್ದಾರೆ. ಹೀಗಾಗಿ ಈ ಬಾರಿ ಸರಳ ದೀಪಾವಳಿ ಆಚರಿಸಬೇಕಿದೆ. ದೀಪ ಹಚ್ಚುವ ಮೂಲಕ ಹಬ್ಬ ಆಚರಣೆ ಮಾಡೋಣ ಎಂದು ಹೇಳಿದರು.
ಮತ್ತೆ ಶೇ.5 ರಷ್ಟು ಮಂದಿಗೆ ಕೊರೊನಾ ಮರುಕಳಿಸಿದೆ ಎಂಬ ಅಂಕಿ-ಅಂಶವೂ ಬೆಳಕಿಗೆ ಬಂದಿದೆ. ಹೀಗಾಗಿ ಒಮ್ಮೆ ಕೊರೊನಾ ಬಂದರೆ ಮತ್ತೊಮ್ಮೆ ಬರುವುದಿಲ್ಲ ಎಂಬ ತಪ್ಪು ಗ್ರಹಿಕೆ ಬೇಡ. ಲಸಿಕೆ ಬರುವ ತನಕ ಎಲ್ಲರೂ ಮುಂಜಾಗ್ರತೆ ವಹಿಸಲೇಬೇಕು ಎಂದು ಸಲಹೆ ನೀಡಿದರು.