ಬೆಂಗಳೂರು: ಯೋಜನೆ ಕಾರ್ಯಾರಂಭ ಮಾಡಿ ಅದನ್ನು ಕಾಲಾವಧಿಯೊಳಗೆ ಮುಗಿಸದೇ ಪ್ರತಿ ವರ್ಷ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿಕೊಂಡು, ಜನರ ತೆರಿಗೆ ಹಣ ನುಂಗುವುದನ್ನೇ ಅಭ್ಯಾಸ ಮಾಡಿಕೊಂಡಿರುವುದಕ್ಕೆ ತಾಜಾ ಉದಾಹರಣೆ ಎಂದರೆ ಶಿವಾನಂದ ವೃತ್ತದ ಬಳಿ ನಿರ್ಮಿಸಲು ಹೊರಟಿರುವ ಉಕ್ಕಿನ ಸೇತುವೆ ಎಂದು ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದರು.
ನಗರದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಬಳಿ ಆಮ್ ಆದ್ಮಿ ಪಕ್ಷದಿಂದ ನಡೆದ ಪ್ರತಿಭಟನೆ ವೇಳೆ ಮಾತನಾಡಿದರು.
ಸುಮಾರು 3 ವರ್ಷಗಳ ಹಿಂದೆ ಅಂದರೆ ಜೂನ್ 30, 2017 ರಂದು ಕಾರ್ಯಾದೇಶವಾದಾಗಿನಿಂದ ಕೇವಲ ಶೇ. 40 ರಷ್ಟು ಕಾಮಗಾರಿ ನಡೆಸಿರುವುದನ್ನು ನೋ ಡಿದರೆ ಬಿಬಿಎಂಪಿಯ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಈ ಕಾಮಗಾರಿಯ ಅವಧಿ 18 ತಿಂಗಳು ಅಂದರೆ 2019ರ ಮಾರ್ಚ್ ಅಂತ್ಯಕ್ಕೆ ಮುಗಿಸಬೇಕಿತ್ತು, ಈಗಾಗಲೇ ಬರೋಬ್ಬರಿ 27 ತಿಂಗಳುಗಳು ಕಳೆದಿವೆ. 2020 ಮುಗಿಯುತ್ತಾ ಬಂದರೂ ಅದರ ಸುಳಿವಿಲ್ಲ. ಈ ಉಕ್ಕಿನ ಸೇತುವೆಯನ್ನು ಪ್ರಾರಂಭಿಸುವಾಗ ಅಂದಾಜು ಮಾಡಿದ್ದ ಯೋಜನಾ ವೆಚ್ಚ 19 ಕೋಟಿ ರೂ. ಈಗಾಗಲೇ ಎರಡು ಬಾರಿ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿದ್ದು 60 ಕೋಟಿ ರೂ.ಗೆ ಮುಟ್ಟಿದೆ. ಇದೇ ರೀತಿ ಎಲ್ಲಾ ಕಾಮಗಾರಿಗಳನ್ನು ಕಾಲಾವಧಿಯಲ್ಲಿ ಮುಗಿಸದೆ ಯೋಜನಾ ವೆಚ್ಚವನ್ನು ಹೆಚ್ಚಳ ಮಾಡಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಈಗ ಇಲ್ಲಿ ಕಾಮಗಾರಿ ಆರಂಭಿಸಿದರೆ ಹಿಂದೆಂದೂ ಕಾಣದಷ್ಟು ಸಂಚಾರ ದಟ್ಟಣೆ ಉಂಟಾಗುತ್ತದೆ.
ಶಿವಾನಂದ ಸರ್ಕಲ್ ಮಾತ್ರವಲ್ಲದೆ ಸುತ್ತಲಿನ ಮಲ್ಲೇಶ್ವರ, ಆನಂದರಾವ್ ವೃತ್ತ ಹಾಗೂ ಇನ್ನಿತರೆ ಕಡೆಗಳಲ್ಲೂ ಸಂಚಾರ ದಟ್ಟಣೆ ವಿಪರೀತವಾಗಲಿದೆ. ಮೊದಲು ಮೇಲ್ಸೇತುವೆ ಉದ್ದವನ್ನು 326 ಮೀ.ಗೆ ನಿಗದಿ ಮಾಡಲಾಗಿತ್ತು. ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷದ ನಂತರ ರೇಸ್‌ಕೋರ್ಸ್ ರಸ್ತೆ ದಿಕ್ಕಿಗೆ ಮೇಲ್ಸೇತುವೆ ಉದ್ದವನ್ನು 493 ಮೀ.ಗೆ ಏರಿಕೆ ಮಾಡಲಾಗಿದೆ ಎಂಬುದು ಏಕೆ ಎಂದು ಅಧಿಕಾರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಮುಗಿದಿರುವ ಕಾಮಗಾರಿಯ ಗುಣಮಟ್ಟ ಸಹ ಕಳಪೆ ಆಗಿದ್ದು ಈಗಾಗಲೇ ಹಾಕಿರುವ ಉಕ್ಕಿನ ಕಂಬಗಳ ಸಾಮರ್ಥ್ಯವೂ ಸಹ ಅನುಮಾನಸ್ಪದವಾಗಿದ್ದು ಅರ್ಧ ಕಾಮಗಾರಿ ಮುಗಿಸಿ ನಿಲ್ಲಿಸಿರುವ ಕಂಬಗಳು ತುಕ್ಕು ಹಿಡಿದಿವೆ. ದೆಹಲಿ ಸರ್ಕಾರ ಈಗಾಗಲೇ ಸುಮಾರು 25 ಕ್ಕೂ ಹೆಚ್ಚು ಫ್ಲೈಓವರ್‌ಗಳನ್ನು ಸುಮಾರು 4 ವರ್ಷಗಳ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದೆ, ಇದು ಎಂಜಿನಿಯರಿಂಗ್ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.
ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸದಿದ್ದರೆ ಎಲ್ಲಾ ಅಪೂರ್ಣ ಕಾಮಗಾರಿಗಳ ಎದುರು ಸರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮೀಕಾಂತ್ ರಾವ್, ಉಪಾಧ್ಯಕ್ಷ ಸುರೇಶ್ ರಾಥೋಡ್, ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಮುಖ್ಯ ವಕ್ತಾರ ಶರತ್ ಖಾದ್ರಿ, ಜ್ಯೋತೀಶ್, ರಾಜಾಜಿನಗರ ಕ್ಷೇತ್ರದ ಹಿರಿಯ ಮುಖಂಡ ಗುರುಮೂರ್ತಿ, ವಿಜಯ್ ಕುಮಾರ್, ಜಗದೀಶ್ ಚಂದ್ರ, ಸತೀಶ್ ಗೌಡ ಜನನಿ ಭರತ್, ಪೂರ್ಣಿಮ ನಾಯ್ಡು, ಅಲ್ಪಸಂಖ್ಯಾತ ಘಟಕದ ಫರೀದ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.