ಪಾಟ್ನಾ: ಕಾಂಗ್ರೆಸ್ ಮಿತ್ರಪಕ್ಷಗಳು ಬಿಹಾರದಲ್ಲಿ ಗದ್ದುಗೆ ಏರುವುದು ಬಹುತ್ತೇಕ ಖಚಿತ ಎಂದು ಕೆಲ ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಬಿಹಾರಕ್ಕೆ ವೀಕ್ಷಕರ ನೇಮಕ ಮಾಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಕುರಿತ ಮಾಹಿತಿ ದೊರೆತ ಬೆನ್ನಲ್ಲೇ ಸಂಭಾವ್ಯ ರಾಜಕೀಯ ಬೆಳವಣಿಗೆಗಳಿಗೆ ಕಾಂಗ್ರೆಸ್ ಸಜ್ಜಾಗಿದೆ.
ಬಿಹಾರ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಮುಕ್ತಾಯವಾಗಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳ ವರದಿ ಪ್ರಕಟಗೊಂಡಿದ್ದು, ಕಾಂಗ್ರೆಸ್ ನೇತೃತ್ವದ ಮಹಾಘಟ್ ಬಂಧನ್‌ಗೆ ಬಿಹಾರದಲ್ಲಿ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಇದೆ ಎಂದು ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳಿವೆ.
ಈ ಹಿನ್ನೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಅವಿನಾಶ್ ಪಾಂಡೆ ಅವರನ್ನು ಬಿಹಾರದ ಕಾಂಗ್ರೆಸ್ ಪಕ್ಷದ ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ.
ಎಲ್ಲಾ ಸಮೀಕ್ಷೆಯಲ್ಲೂ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯುವ ಮಾಹಿತಿ ಇಲ್ಲ. ಈ ಕಾರಣಕ್ಕೇ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ತಮ್ಮ ಶಾಸಕರನ್ನು ಹಿಡಿತದಲ್ಲಿಟ್ಟುಕೊಂಡು ಬೇರೆ ಪಕ್ಷದ ಶಾಸಕರಿಗೆ ಗಾಳ ಬೀಸಲು ರಾಜಕೀಯ ಪಕ್ಷಗಳು ಮುಂದಾಗಿವೆ. ಇದರ ಮೊದಲ ಹಂತವಾಗಿ ಕಾಂಗ್ರೆಸ್ ಪಕ್ಷ ಬಿಹಾರಕ್ಕೆ ತನ್ನ ವೀಕ್ಷಕರನ್ನು ನೇಮಕ ಮಾಡಿದೆ.
ಈ ಇಬ್ಬರೂ ನಾಯಕರು ಇಂದು ಮಧ್ಯಾಹ್ನದ ವೇಳೆಗೆ ಪಾಟ್ನಾಗೆ ತೆರಳುವ ಸಾಧ್ಯತೆ ಇದ್ದು, ಅಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ಗಮನ ಕೇಂದ್ರೀಕರಿಸಲಿದ್ದಾರೆ. ಅಂತೆಯೇ ಸರ್ಕಾರ ರಚನೆ ಮತ್ತು ಇತರೆ ರಾಜಕೀಯ ಬೆಳವಣಿಗೆಗಳ ಕುರಿತು ಕೇಂದ್ರ ನಾಯಕರಿಗೆ ನಿರಂತರ ವರದಿ ನೀಡಲಿದ್ದಾರೆ ಎಂದು ಹೇಳಲಾಗಿದೆ.