ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹೊಸಕೋಟೆ ಗ್ರಾಮದ ಸಮೀಪ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.
ತಾಲೂಕಿನ ಕೆಲ್ಲೂರು ಹೊಸಕೋಟೆ ಗ್ರಾಮದ ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತದೇಹ ಹೊತ್ತಿ ಉರಿಯುತ್ತಿರುವುದನ್ನು ನೋಡಿದ ಗ್ರಾಮಸ್ಥರು ಗಾಬರಿಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿರಿಯಾಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಯಾರೋ ದುಷ್ಕರ್ಮಿಗಳು ಬೆರೆಡೆ ಕೊಲೆ ಮಾಡಿದ ಬಳಿಕ ಇಲ್ಲಿವರೆಗೆ ತಂದು ರಸ್ತೆ ಬದಿಯಲ್ಲಿ ಬೀಸಾಡಿ ಬೆಂಕಿಹಚ್ಚಿ ಪರಾರಿಯಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಲೆಯಾದ ಆ ಮಹಿಳೆ ಯಾರು ಅವರ ಹಿನ್ನೆಲೆ ಏನು ಎಂಬ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಪೊಲೀಸರಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಯಾವ ರೀತಿಯಲ್ಲಿ ಹತ್ಯೆಕೋರರನ್ನು ಪತ್ತೆಹಚ್ಚುವುದು ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.