ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರದಲ್ಲಿ ಯಾರು ಮುಖ್ಯಸ್ಥರಾಗುತ್ತಾರೆ ಎಂಬ ಬಗ್ಗೆ ಒಬ್ಬೊಬ್ಬ ನಾಯಕರು ಒಂದೊಂದು ಹೇಳಿಕೆ ನೀಡಿದ್ದ ನಂತರ ಇದೀಗ ಪಕ್ಷದ ಭವಿಷ್ಯದ ರಾಜ್ಯ ನಾಯಕತ್ವದ ಬಗ್ಗೆ ಸಾರ್ವಜನಿಕ ಹೇಳಿಕೆಗಳನ್ನು ನೀಡಬೇಡಿ ಎಂದು ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ ನಾಯಕರು ಮತ್ತು ಕಾರ್ಯಕರ್ತರಿಗೆ ಸಲಹೆ ನೀಡಿದೆ.
ಭವಿಷ್ಯದ ರಾಜ್ಯ ನಾಯಕತ್ವದ ಬಗ್ಗೆ ಪಕ್ಗಷದ ಕೆಲೆ ನಾಯಕರು ಮತ್ತು ಕಾರ್ಯಕರ್ತರು ಬಹಿರಂಗ ಹೇಳಿಕೆ ನೀಡುವುದಕ್ಕೆ ಈ ಮೂಲಕ ಶಿಸ್ತು ಸಮಿತಿ ಕಡಿವಾಣ ಹಾಕಿದೆ.
ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮತ್ತು ನಮ್ಮ ರಾಜ್ಯದ ಹಿತದೃಷ್ಟಿಯಿಂದ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಕೆಲಸ ಮಾಡಿದರೆ ಉತ್ತಮ ಎಂದು ಕಿವಿ ಮಾತು ಹೇಳಿದ್ದಾರೆ.
ಮಾಜಿ ಸಚಿವ ಮತ್ತು ಶಾಸಕ ಜಮೀರ್ ಅಹಮದ್ ಖಾನ್ ಇತ್ತೀಚೆಗೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದರೆ, ಅವರ ಪಕ್ಷದ ಕೆಲವು ಸಹೋದ್ಯೋಗಿಗಳಾದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕಿ ಸೌಮ್ಯಾ ರೆಡ್ಡಿ ಮತ್ತು ಹನುಮಂತರಾಯಪ್ಪ ಅವರು ಶಿವಕುಮಾರ್ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ಹೇಳಿದ್ದರು.
ನಾಯಕತ್ವದ ಸಂಬಂಧಿತ ಪ್ರಶ್ನೆಯನ್ನು ತಕ್ಕ ಸಮಯಕ್ಕೆ ಕೇಳುವುದು ಜಾಣತನ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿರುವ ಹಿನ್ನೆಲೆ ಈ ಸೂಚನೆ ಗಮನ ಸೆಳೆದಿದೆ. ಇನ್ನು ಮುಂದಾದರು ಪಕ್ಷದ ಉನ್ನತಿಗೆ ನೆರವಾಗುವಂತ ಮಾತನಾಡಿ ಅದನ್ನು ಬಿಟ್ಟು ಈ ರೀತಿಯ ಮಾತುಗಳಿಂದ ರಾಜ್ಯದ ಜನರ ಮನಸ್ಸು ವಿಚಲಿತ ಮಾಡಿ ನಮ್ಮ ಬಗ್ಗೆ ಅಸಡ್ಡೆ ಭಾವನೆ ಮೂಡುವಂತ ವಾತಾವರಣ ಸೃಷ್ಟಿಸಬೇಡಿ ಎಂದು ಶಿಸ್ತು ಸಮಿತಿ ಮನವಿ ಮಾಡಿದೆ.