ಬೆಂಗಳೂರು/ತುಮಕೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಯ ಜಿದ್ದಾಜಿದ್ದಿನ ಅಖಾಡದ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇರೋದರಿಂದ ನಾಳೆಯ ಮತ ಎಣಿಕೆ ಮತ್ತಷ್ಟು ಕುತೂಹಲ ಕೆರಳಿಸಿದೆ.
ಶಿರಾದ ಉಪಚುನಾವಣೆಯ ಮತ ಎಣಿಕೆ ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಒಟ್ಟು 24 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಸುತ್ತಿನಲ್ಲಿ ತೀವ್ರ ಹಣಾಹಣಿಯಿಂದಾಗಿ ರೋಚಕತೆಯ ಘಟ್ಟ ತಲುಪುವ ಸಾಧ್ಯತೆ. ಈ ಬಾರಿ ಅಂಚೆ 4821 ಅಂಚೆ ಮತ ಸೇರಿ ಒಟ್ಟು ಶೇ.84 ರಷ್ಟು ಮತದಾನವಾಗಿದ್ದು. ಇವಿಎಂ ಮತಯಂತ್ರದಲ್ಲಿ 1,77,645 ಮತದಾರರು ಮತಚಲಾಯಿಸಿದ್ದಾರೆ.
ಮುಂಜಾನೆ 7 ಗಂಟೆಗೆ ಸ್ರ್ಟಾಂಗ್ ರೂಂ ತೆರಯಲಿದ್ದು, 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಒಟ್ಟು 14 ಟೇಬಲ್ ಗಳಲ್ಲಿ 24 ಸುತ್ತು ಮತ ಎಣಿಕೆ ನಡೆಯಲಿದ್ದು, 330 ಮತಗಟ್ಟೆಗಳ ರಿಸಲ್ಟ್ ಹೊರಬೀಳಲಿದೆ.
ಆರ್.ಆರ್.ನಗರದಲ್ಲಿ 25 ಸುತ್ತು ಮತ ಎಣಿಕೆ
ಆರ್.ಆರ್.ನಗರ ಮಿನಿ ಕದನದಲ್ಲಿ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಸೇರಿ ಕಣದಲ್ಲಿ ಒಟ್ಟು 16 ಅಭ್ಯರ್ಥಿಗಳು ಇದ್ದಾರೆ. ಕ್ಷೇತ್ರದಲ್ಲಿ 412 ಅಂಚೆ ಹಾಗೂ 04 ಇಟಿಪಿಬಿಎಸ್ ಸೇರಿದಂತೆ 2,09,828 ಮತ ಚಲಾವಣೆ ಆಗಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಮೊದಲು ಅಂಚೆ ಹಾಗೂ ಇಟಿಪಿಬಿಎಸ್ ಮತಗಳನ್ನ ಎಣಿಕೆ ಹಾಕಲಾಗುವುದು. ಇವಿಎಂ ಮತ ಎಣಿಕೆ ಬೆಳಗ್ಗೆ 8.30 ಕ್ಕೆ ಪ್ರಾರಂಭವಾಗಲಿದೆ. ಒಟ್ಟು 25 ಸುತ್ತು ಮತ ಎಣಿಕೆ ಇರಲಿದೆ.
ಇಲ್ಲಿ ಮತ ಎಣಿಕೆಗೆ ಸಿದ್ಧತೆ ಮುಕ್ತಾಯವಾಗಿದೆ. ಬಿಬಿಎಂಪಿ, ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಮತ ಎಣಿಕೆ ನಡೆಯಲಿದೆ. ಬಿಜೆಪಿಯ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ ಹಾಗೂ ಜೆಡಿಎಸ್‍ನ ಕೃಷ್ಣಮೂರ್ತಿ ಭವಿಷ್ಯ ನಾಳೆ ಪ್ರಕಟವಾಗಲಿದೆ.
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ಪ್ರತಿ ಸುತ್ತಿನಲ್ಲಿ 28 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಒಂದು ಕೊಠಡಿಯಲ್ಲಿ 7 ಎಣಿಕಾ ಟೇಬಲ್ ಗಳಂತೆ ಒಟ್ಟು 4 ಕೊಠಡಿಯಲ್ಲಿ 28 ಎಣಿಕಾ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ 3 ಸಹಾಯಕ ಚುನಾವಣೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 250 ಸಿಬ್ಬಂದಿ ನೇಮಕ ಮಾಡಲಾಗಿದ್ದು, 2 ಹಂತದ ತರಬೇತಿ ನೀಡಲಾಗಿದೆ. ಚುನಾವಣೆ ಸಿಬ್ಬಂದಿಗೆ ನಾಳೆ ಮೊಬೈಲ್ ನಿಷೇಧ ಮಾಡಲಾಗಿದೆ. ಮಾಧ್ಯಮಗಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಆರ್.ಆರ್.ನಗರ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಮತ ಎಣಿಕೆ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಇಡೀ ಕ್ಷೇತ್ರ ವ್ಯಾಪಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟಕ್ಕೂ ನಿರ್ಬಂಧ ಹಾಕಲಾಗಿದೆ. ಪೊಲೀಸರ ಹದ್ದಿನ ಕಣ್ಣಿನಲ್ಲಿ ಮತ ಎಣಿಕೆ ನಡೆಯಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಭಾರಿ ಮುಂಜಾಗ್ರತೆವಹಿಸಿದ್ದು ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಥರ್ಮಲ್ ಸ್ಕಾನಿಂಗ್ ನಡೆಯಲಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ನಾಡಿದ್ದು ಬೆಳಗ್ಗೆ 6 ವರೆಗೂ ಮತ ಎಣಿಕಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.