ಚೆನ್ನೈ: ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಕಿಡಿಗೇಡಿಗಳು ದೃಶ್ಯ ಮಾಧ್ಯಮದ ಪತ್ರಕರ್ತರೊಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ.
ಇಸ್ರೇವೆಲ್ ಮೋಸಸ್(27) ಹತ್ಯೆಯಾದ ಪತ್ರಕರ್ತ. ಭಾನುವಾರ ಸಂಜೆ ಅವರನ್ನು ಮನೆಯಿಂದ ಹೊರಗೆ ಕರೆದೊಯ್ದು, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ದಾಳಿ ಮಾಡಿದವರು ಆತನ ಸ್ನೇಹಿತರೇ ಇರಬೇಕು ಎಂದು ಆರಂಭದಲ್ಲಿ ಕುಟುಂಬಸ್ಥರು ಅಂದುಕೊಂಡಿದ್ದರು. ಆದರೆ ನಂತರದಲ್ಲಿ ಡ್ರಗ್ ಡೀಲರ್‍ಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಭಯದಲ್ಲಿ ಹತ್ಯೆ ಮಾಡಲಾಗಿದೆ ಎಂಬುವುದು ತಿಳಿದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಅತಿಕ್ರಮಣ ಮಾಡಿದ ಭೂಮಿಯನ್ನು ಮಾರಾಟ ಮಾಡುವುದು ಹಾಗೂ ಸ್ಥಳೀಯ ಕೆರೆಯ ಸುತ್ತ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸೆಸ್ ಯಾವುದೇ ರೀತಿಯ ಸುದ್ದಿಯನ್ನು ಬಿತ್ತರಿಸಿರಲಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮೋಸೆಸ್ ತಂದೆ ಜ್ಞಾನರಾಜ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ನನ್ನ ಮಗ ದೂರು ನೀಡಿದ ಬಳಿಕ ಜಿಲ್ಲಾ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಅವರ ಜೀವ ಅಪಾಯದಲ್ಲಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದು, ಮೋಸೆಸ್ ನಮಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಈ ಕೊಲೆ ಭೂಮಿ ವಿಚಾರವಾಗಿ ವೈಯಕ್ತಿಕ ಪ್ರತಿಕಾರ ತೀರಿಸಿಕೊಳ್ಳಲು ನಡೆದಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಿ.ಶಣ್ಮುಗಪ್ರಿಯ ತಿಳಿಸಿದ್ದಾರೆ. ಆದರೆ ಪೊಲೀಸರ ಈ ವಾದವನ್ನು ಹಿರಿಯ ಪತ್ರಕರ್ತೆ ಭಾರತಿ ತಮಿಝಾನ್ ಅಲ್ಲಗಳೆದಿದ್ದಾರೆ.