ಮೈಸೂರು: ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವಾಕ್ ಸಮರ ತಾರಕಕ್ಕೇರಿದೆ. ಮೊನ್ನೆಯಷ್ಟೇ ಡಿಸಿ ವಿರುದ್ಧ ಶಾಸಕ ಮಂಜುನಾಥ್ ಕೆಡಿಪಿ ಸಭೆಯಲ್ಲಿ ಕಿಡಿ ಕಾರಿದ್ರು. ಇದೀಗ ಅದಕ್ಕೆ ಪತ್ರದ ಮೂಲಕ ಉತ್ತರ ನೀಡಿರುವ ರೋಹಿಣಿ ಸಿಂಧೂರಿ ಸಖತ್ ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಇದರಿಂದ ಶಾಸಕರ ಇನ್ನೊಂದು ಮುಖ ಸಾರ್ವಜನಿಕವಾಗಿ ಕಳಚಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕುವಂತಿದೆ.
ನ.24 ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಜಿಲ್ಲಾ ತ್ರೈ ಮಾಸಿಕ ಸಭೆ ನಡೆಸಲಾಗಿತ್ತು. ಸಂಸದ ಪ್ರತಾಪ್‌ಸಿಂಹ ಶಾಸಕರಾದ ಎಚ್.ಪಿ ಮಂಜುನಾಥ್, ಹರ್ಷವರ್ಧನ್ ನಾಗೇಂದ್ರ ಜಿ.ಟಿ. ದೇವೇಗೌಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಸ್ ಪಿ ರಿಷ್ಯಂತ್ ಸೇರಿ ಹಲವು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್ ಡಿಸಿ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಅಲ್ಲದೆ ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಸಚಿವರಿಗೆ ನೇರವಾಗಿ ಮಂಜುನಾಥ್ ದೂರುಗಳ ಸುರಿಮಳೆಯನ್ನೇ ಸುರಿಸಿದ್ದರು. ನಮ್ಮ ಕೆಲಸ ಏನು ಆಗ್ತಿಲ್ಲ. ನಮ್ಮನ್ನ ಸಂಪೂರ್ಣ ಕಡೆಗಣಿಸಿ’ ಮಹಾರಾಣಿಯಂತೆ ವರ್ತಿಸುತ್ತಿದ್ದಾರೆ. ನಮಗೆ ತ್ರಿಷಿಕಾ ಹಾಗೂ ಪ್ರಮೋದಾ ದೇವಿ ಅವರೇ ಮಹಾರಾಣಿಯರು’ ಮೈಸೂರಿಗೆ ಮೂರನೇ ಮಹಾರಾಣಿ ಬೇಡ ಎಂದು ಜರಿದಿದ್ದರು.
ಹುಣಸೂರು ಕ್ಷೇತ್ರದ ಶಾಸಕರ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಪತ್ರದ ಮೂಲಕ ಉತ್ತರ ನೀಡಿ, ಶಾಸಕರಿಗೆ ತಿರುಗೇಟು ಕೊಟ್ಟಿದ್ದಾರೆ. ಡಿಸಿಗೆ ಶಿಷ್ಟಾಚಾರದ ಪಾಠ ಹೇಳಿದ್ದ ಶಾಸಕರಿಗೆ ಈ ಉತ್ತರದಿಂದ ವೈಯುಕ್ತಿಕ ವಿಚಾರಗಳು ಹೊರ ಬಂದಿವೆ. ಈಗ ಅವು ಸಾರ್ವಜನಿಕವಾಗಿ ಮುಜುಗರಕ್ಕಿಡು ಮಾಡುಮಾಡಿದಂತೆ ಕಾಣುತ್ತಿವೆ.
ಅದೇನಪ್ಪ ಅಂದ್ರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನನಗೆ (ಡಿಸಿ) ಪತ್ರ ಬರೆದಿಲ್ಲ ಬದಲಿಗೆ ನಿಮ್ಮ ಭೂ ಪರಿವರ್ತನಾ ಅರ್ಜಿಗಳು ಮಾತ್ರ ನನ್ನ ಕಚೇರಿಯಲ್ಲಿವೆ ಅನ್ನೋ ಮೂಲಕ ವೈಯುಕ್ತಿಕ ಅರ್ಜಿಗಳಿಗೆ ಮನ್ನಣೆ ನೀಡುವುದಿಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತ್ರದಲ್ಲೇನಿದೆ?
1- ಕ್ಷೇತ್ರದ ಅಭಿವೃದ್ಧಿ ಕಾರ್ಯ ಕುರಿತ ಯಾವ ಪತ್ರಗಳು ತಮ್ಮಿಂದ ಬಂದಿಲ್ಲ
2- ನಿಮ್ಮ ವೈಯಕ್ತಿಕ ಹೆಸರಿನಲ್ಲಿ ಹಲವು ಅರ್ಜಿ ಗಳಿವೆ
3- ಅವು ಮೈಸೂರು ತಾಲೂಕಿನಲ್ಲಿ ಕೇರ್ಗಳಿ ಗ್ರಾಮದ ಹಲವು ಸರ್ವೆ ನಂಬರ್ ಗಳ ಭೂ ಪರಿವರ್ತನೆ ಅರ್ಜಿಗಳು
4- ಆ ಅರ್ಜಿಗಳ ವಿಲೇವಾರಿ ಕಾನೂನು ಪ್ರಕಾರ ಮಾಡುತ್ತೇವೆ
5- ಗಜಪಯಣದಲ್ಲಿ ಯಾವುದೇ ಶಿಷ್ಟಚಾರ ಉಲ್ಲಂಘನೆ ಆಗಿಲ್ಲ
6- ದಸರಾ ಉನ್ನತ ಸಮಿತಿ ಸಭೆ ತೀರ್ಮಾನದಂತೆ ನಡೆದು ಕೊಳ್ಳಲಾಗಿದೆ
7- ಹುಣಸೂರಿಗೆ ಪ್ರಗತಿ ಪರಿಶೀಲನೆಗೆ ಭೇಟಿ ನೀಡಿದ್ದಾಗ ತಾವು ಅನಾರೋಗ್ಯದಿಂದ ಇದ್ದ ಕಾರಣ ನಿಮ್ಮ ಜೊತೆ ಚರ್ಚೆ ಸಾಧ್ಯವಾಗಿಲ್ಲ
8- ಕೆಡಿಪಿ ಸಭೆಯಲ್ಲಿ ನೀವು ನೀಡಿರುವ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ
9- ಹೇಳಿಕೆ ನೀಡುವ ಮುನ್ನ ವಾಸ್ತವಾಂಶ ಗಮನಿಸಿ ಹೇಳಿಕೆ ನೀಡಿ ಎಂದು ಡಿಸಿ ರೋಹಿಣಿ ಸಿಂಧೂರಿ ಮಂಜುನಾಥ್ ಅವರಿಗೆ ನೇರವಾಗಿ ಪತ್ರ ಬರೆದಿದ್ದಾರೆ.
ಈ ಹಿಂದೆ ಶಾಸಕ ಸಾ.ರಾ ಮಹೇಶ್ ಸಹಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಆಗಲೂ ರೋಹಿಣಿ ಸಿಂಧೂರಿ ಪತ್ರಿಕೆ ಮೂಲಕ ಉತ್ತರ ನೀಡಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಶಾಸಕರಿಗೆ ಪತ್ರ ಬರೆದು ಅವರ ಭೂ ಪರಿವರ್ತನಾ ಅರ್ಜಿಗಳ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆಗೆ ಈಡಾಗುವಂತೆ ಮಾಡಿದ್ದಾರೆ.
ಒಟ್ಟಾರೆ ಮೈಸೂರಿನ ಇಬ್ಬರು ಶಾಸಕರು ಇದೀಗಾ ಡಿಸಿ ವಿರುದ್ಧ ಆಕ್ರೋಶದ ಜತೆಗೆ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಗಳು ಕೂಡ ಪತ್ರದ ಮೂಲಕ ಟಾಂಗ್ ನೀಡಿದ್ದು, ಈ ವಾದ ಪ್ರತಿವಾದ ಯಾವ ಹಂತ ತಲುಪುತ್ತೋ ಎಂಬುವುದು ಇನಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.