ಮೈಸೂರು: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಹೋರಾಟಕ್ಕೆ ಸಿದ್ದರಾಮಯ್ಯನವರೇ ಈಗಲಾದರೂ ಮುಂದೆ ಬನ್ನಿ, ನಿಮ್ಮ ಹಿಂದೆ ನಾವೆಲ್ಲರೂ ಬರುತ್ತೇವೆ ನಿಮ್ಮ ನೇತೃತ್ವದಲ್ಲಿ ಹೋರಾಟ ಮಾಡೋಕೆ ನಮಗೇನೂ ಅಭ್ಯಂತರ ಇಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬರ ಹೋರಾಟಕ್ಕೆ ಅವರು ಬಂದರೆ ನಾನು ನಾಯಕತ್ವ ತ್ಯಾಗ ಮಾಡುತ್ತೇನೆ. ಇದಕ್ಕೂ ಮೊದಲು ಕೂಡ ನಾನು ನಾಯಕತ್ವ ತ್ಯಾಗ ಮಾಡಿದ್ದಕ್ಕೇ ಸಿದ್ದರಾಮಯ್ಯ ಸಿಎಂ ಆಗಿದ್ದು ಎಂದರು.
ಸಿದ್ದರಾಮಯ್ಯನವರೇ ಏಕವಚನದಲ್ಲಿ ಮಾತನಾಡೋದು ಬಿಡಿ ಎಂದು ಸಲಹೆಯನ್ನೂ ನೀಡಿರುವ ವಿಶ್ವನಾಥ್, ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಬೇಡಿ. ನಾನು ನಿಮಗಿಂತ ರಾಜಕೀಯದಲ್ಲಿ ಹಿರಿಯ. ನನ್ನ ಸಲಹೆಗಳನ್ನು ಸ್ವೀಕರಿಸಿ. ಮುಂದಾದರೂ ಎಲ್ಲರನ್ನೂ ಬಹುವಚನದಲ್ಲಿ ಮಾತನಾಡಿಸಿ. ಎಲ್ಲರನ್ನೂ ಗೌರವದಿಂದ ಕಾಣುವುದನ್ನು ಕಲಿಯಿರಿ ಎಂದು ಸಲಹೆ ನೀಡಿದರು.
ಇನ್ನು ನಮ್ಮ ಸಮಯದಾಯದ ಅಭಿವೃದ್ಧಿಗೆ ಕರೆಯುತ್ತಿದ್ದೇವೆ. ಇದು ರಾಜಕೀಯ ಹೋರಾಟ ಅಲ್ಲ. ನಾವೇನೂ ನಿಮ್ಮನ್ನು ಮತ್ತೆ ಸಿಎಂ ಮಾಡೋಕೆ ಜೈ ಅನ್ನೋದಿಲ್ಲ. ಆದರೆ ಈ ಹಿಂದೆ ನೀವು ಸಿಎಂ ಆಗಲು ನಮ್ಮ ಸಮುದಾಯದವರು ಕುರಿಗಳನ್ನು ಮಾರಿದ್ದಾರೆ. ಕುರುಬ ಸಮುದಾಯ ಎಂದೂ ಅಗೌರವದಿಂದ ನಿಮ್ಮನ್ನು ಕಂಡಿಲ್ಲ. ನಿಮ್ಮ ನಾಯಕತ್ವಕ್ಕೆ ಬೆಲೆ ಬಂದಿದೆ. ನಮ್ಮ ಸಮುದಾಯವನ್ನು ನಿಮ್ಮ ಸರ್ವಾಂಗೀಣ ಬೆಳವಣಿಗೆಗೆ ಬಳಸಿಕೊಂಡಿದ್ದೀರಾ. ಈಗ ಸಮುದಾಯದ ಪರ ಹೋರಾಟಕ್ಕೆ ಏಕೆ ಹಿಂದೇಟು ಹಾಕುತ್ತಿದ್ದೀರ ಎಂದು ಪ್ರಶ್ನಿಸಿದ್ದಾರೆ.
ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರಿಸುವ ಹೋರಾಟ ಇನ್ನೂ ಗಂಭೀರವಾಗಿ ಆಗಬೇಕಿದೆ. ಅದಕ್ಕಾಗಿ ನಿಮ್ಮ ಸಹಕಾರ ಹಾಗೂ ಬೆಂಬಲ ಬೇಕು. ನಮ್ಮ ಜೊತೆ ನೀವೂ ಹೋರಾಟಕ್ಕೆ ಬನ್ನಿ. ನಿಮ್ಮ ಸಹಕಾರ, ಬೆಂಬಲ ಕುರುಬ ಸಮುದಾಯಕ್ಕೆ ಬೇಕಾಗಿದೆ. ಈಗಲಾದರೂ ಹೋರಾಟಕ್ಕೆ ಬನ್ನಿ ಎಂದು ಬಹಿರಂಗವಾಗಿ ಆಹ್ವಾನ ನೀಡಿರುವ ವಿಶ್ವನಾಥ್, ನೀವು ಮಾರ್ಗದರ್ಶನ ಮಾಡಿದ್ದರೆ ಈ ಹೋರಾಟ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು. ಆದರೆ, ನೀವು ಹೋರಾಟವೇ ಬೇಡ ಅಂತ ಹೇಳೋದು ಎಷ್ಟು ಸರಿ? ಕನಕ ಗೋಪುರ ಬಿದ್ದಾಗ, ಮಠ ಕಟ್ಟಿದಾಗ ನೀವು ಇರಲಿಲ್ಲ. ಮಠ ಕಟ್ಟೋದು ಅಷ್ಟು ಸುಲಭ ಅಲ್ಲ ಎಂದೂ ಟೀಕಿಸಿದ್ದಾರೆ.