ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ಕನ್ನಡಪರ ಹೋರಾಟಗಾರರು ರಾಜ್ಯದ ವಿವಿಧ ಮೂಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಬೆಳಗ್ಗೆ 10 ಗಂಟೆ ನಂತರ ಕಾವೇರಿದೆ.
ಕನ್ನಡ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿವೆ. ಬೆಂಗಳೂರಿನ ಟೌನ್ಹಾಲ್ ಬಳಿ ಪ್ರತಿಭಟನೆಗೆ ಇಳಿದಿದ್ದ ವಿವಿಧ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ರಾಮನಗರದಲ್ಲೂ ಸಹ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರದ ಎಚ್ಚರಿಕೆಗೂ ಮಣಿಯದ ಕನ್ನಡ ಪರ ಸಂಘಟನೆಗಳು ತಮ್ಮ ಹೋರಾಟ ಮುಂದುವರಿಸಿವೆ. ಪ್ರತಿಭಟನಾಕಾರರು ಹೆದ್ದಾರಿ ತಡೆ, ಟೈರ್ಗೆ ಬೆಂಕಿ, ಪ್ರತಿಕೃತಿ ದಹನ ಮಾಡುತ್ತಿದ್ದಾರೆ. ಇನ್ನು, ಹಲವೆಡೆ ಕರ್ನಾಟಕ ಬಂದ್ಗೆ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿದೆ.
ಕಾರ್ಪೊರೇಷನ್ ಬಳಿ ವಾಟಾಳ್ ದಿಢೀರ್ ಪ್ರತಿಭಟನೆ ಆರಂಭಿಸಿದ್ದರಿಂದ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ. ಇದೇ ವೇಳೆ ಮಾತನಾಡಿ ವಾಟಾಳ್ ನಾಗರಾಜ್ ನಮ್ಮ ತಂದೆ-ತಾಯಿ ಮತ್ತು ನನ್ನ ಪತ್ನಿ ನಿಧನರಾದಾಗಲು ನನಗೆ ಇಷ್ಟೊಂದು ನೋವಾಗಿರಲಿಲ್ಲ. ಸಿಎಂ ಯಡಿಯೂರಪ್ಪ ಮರಾಠಿ ಏಜೆಂಟ್. ಆರ್ಎಸ್ಎಸ್ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಕನ್ನಡ ವಿರೋಧಿ ಎಂದು ಜರಿದಿದ್ದಾರೆ.
ಇದೇ ವೇಳೆ ಮಾತನಾಡಿದ ಸಾರಾ ಗೋವಿಂದ್ ಬಂದ್ ಕರೆ ಕೊಟ್ಟಿದ್ದೀವಿ ಬಂದ್ ವಿಫಲ ಆಗಿದ್ರೆ ಸರ್ಕಾರ ಹೊಣೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆಯುವ ಬಗ್ಗೆ ಹೋರಾಟ ಮುಂದುವರಿಯುತ್ತದೆ ಎಂದರು.
ಇನ್ನು ನಮ್ಮ ಹೋರಾಟ ಇಂದಿಗೆ ಕೊನೆಗೊಳ್ಳುವುದಿಲ್ಲ. ಬರುವ ಬುಧವಾರ ಸಭೆ ಇದೆ, ಜೈಲ್ ಬರೋ ಚಳವಳಿ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದರು. ಇದೇ ವೇಳೆ ಯಡಿಯೂರಪ್ಪ ಅತ್ಯಂತ ಕೆಟ್ಟ ದುಷ್ಟ ಮುಖ್ಯಮಂತ್ರಿ ಎಂದು ವಾಟಾಳ್ ತೀವ್ರ ವಾಗ್ದಾಳಿ ನಡೆಸಿದರು.
ಕರವೇ ಕಚೇರಿ ಇರುವ ಗಾಂಧಿನಗರದಿಂದ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ನಾರಾಯಣ ಗೌಡ ಅವರನ್ನು ಬಂಧಿಸಿದ ಪೊಲೀಸರು, ಬಿಎಂಟಿಸಿ ಬಸ್ ಮೂಲಕ ಕರೆದೊಕೊಂಡು ಹೋದರು.
ಕಾರ್ಪೊರೇಷನ್ ಬಳಿ ಯತ್ನಾಳ್ ಭಾವಚಿತ್ರಕ್ಕೆ ಅಂತ್ಯಕ್ರಿಯೆ, ಶವಯಾತ್ರೆ ಅಣಕು ಪ್ರದರ್ಶನ. ಮಡಿಕೆ , ಹೊಗೆ ಹಾಕಿ ಸತ್ತ ಸತ್ತ ಯತ್ನಾಳ್ ಸತ್ತ ಎಂದು ಆಕ್ರೋಶ. ಯತ್ನಾಳ್ ಗೊಂಬೆಗೆ ಚಪ್ಪಲಿ ಏಟು.
ರೂಪೇಶ್ ರಾಜಣ್ಣ ಮತ್ತು ಕನ್ನಡ ಸೇನೆ ಕುಮಾರ್ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು. ಬಿಬಿಎಂಟಿಸಿ ಬಸ್ ನಲ್ಲಿ ಕಾರ್ಯಕರ್ತನ್ನು ತುಂಬಿದ ಸಿಬ್ಬಂದಿ. ಈ ವೇಳೆ ರಸ್ತೆ ಮಧ್ಯೆ ಕುಳಿತು ಧರಣಿ ಮಾಡಿದ ಕಾರ್ಯಕರ್ತರು. ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.