- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೀದರ್ ಜಿಲ್ಲೆಯ ಚಾಂಬೋಳಾ ಗ್ರಾಮದ ಪಿಡಿಒ ಮಂಗಳಾ ಕಾಂಬ್ಳೆ ಅವರಿಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಹಾಗೂ ಇಷ್ಟು ಸಣ್ಣ ವಿಷಯವನ್ನು ನಿಭಾಯಿಸಲು ಆಗದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮತ್ತು ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳು ಭ್ರಷ್ಟಾಚಾರ ಕೂಪಗಳಾಗಿ ಮಾರ್ಪಟ್ಟಿವೆ. ಇಂತಹ ಭ್ರಷ್ಟಾಚಾರದ ವಿರುದ್ದ ಮಾತನಾಡಿದ ಮಹಿಳೆ ಮೇಲೆ ಒತ್ತಡ ಹೇರಿ, ಜೀವ ಬೆದರಿಕೆ ಹಾಕುವಂತಹ ಹೀನ ಕೆಲಸಕ್ಕೆ ಜನಪ್ರತಿನಿಧಿಗಳು ಕೈ ಹಾಕುತ್ತಾರೆ ಅದಕ್ಕೆ ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ಕುಮ್ಮಕ್ಕು ಕೊಡುತ್ತಾರೆ ಎಂದರೆ ಯಾವ ಕಾಲದಲ್ಲಿ ಇದ್ದೇವೆ ಎಂದು ಅನುಮಾನ ಕಾಡುತ್ತಿದೆ ಎಂದರು.
ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ ಎನ್ನುವ ಕಾರಣಕ್ಕೆ ಪಿಡಿಒ ಮೇಲೆ ಹಲ್ಲೆ ಯತ್ನ ಸೇರಿದಂತೆ ಕೆಲಸ ಮಾಡಲು ಆಗದಂತಹ ವಾತಾವರಣ ನಿರ್ಮಿಸಿರುವುದನ್ನು ಆಮ್ ಆದ್ಮಿ ಪಕ್ಷ ಖಂಡಿಸುತ್ತದೆ.
ಇಂತಹ ದಬ್ಬಾಳಿಕೆಯನ್ನು ಸಹಿಸುವುದಿಲ್ಲ ಹಾಗೂ ಶೀಘ್ರ ಈ ಸಮಸ್ಯೆ ಪರಿಹಾರಕ್ಕೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ ಎಂದರು.
ಈ ಸಮಸ್ಯೆ ತಾರ್ಕಿಕ ಅಂತ್ಯ ಕಾಣುವ ತನಕ ಪಕ್ಷವು ಇವರ ಜತೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು. ಸಂತ್ರಸ್ತ ಪಿಡಿಒ ಮಂಗಳಾ ಕಾಂಬ್ಳೆ ಇದ್ದರು.