BMTC ಘಟಕ-29ರ ಆವರಣದಲ್ಲೇ ನಡೆದ ಅಪಘಾತ: ಗಾಯಾಳು ಚಾಲಕನಿಗೆ 6 ಸಾವಿರ ಕೊಟ್ಟು ಸುಮ್ಮನಾದ ಅಧಿಕಾರಿಗಳು- ಬಸ್ ನಿಲ್ಲಿಸಿ ಪ್ರತಿಭಟನೆಗಿಳಿದ ನೌಕರರು
ಘಟನೆ ನಡೆದು ಮೂರು ದಿನಗಳಾಗುತ್ತಾ ಬಂದರೂ ಕೆ.ಆರ್. ಪುರ ಡಿಪೋ -29ರಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಅಪಘಾತ ನಡೆದ ತಕ್ಷಣ ಕೇವಲ 6000 ರೂಪಾಯಿ ನೀಡಿ ಕೈತೊಳೆದುಕೊಂಡಿದ್ದಾರೆ. ಹೀಗೆ ಆದರೆ ನಾವು ಏನು ಮಾಡುವುದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗ ಸಂಸ್ಥೆಯ ಕೆ.ಆರ್.ಪುರ ಬಿಎಂಟಿಸಿ ಘಟಕ-29ರಲ್ಲಿ ಚಾಲಕನಿಗೆ ಬಸ್ ಡಿಕ್ಕಿಹೊಡೆದು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಘಟಕದಲ್ಲೀಗ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗುತ್ತಿಗೆ ಆಧಾರಿತ ಚಾಲಕ ನಾಗರಾಜ್ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಎಲೆಕ್ಟ್ರಿಕ್ ವಾಹನಗಳ ನಿರ್ವಾಹಣೆ ಹೊಣೆ ಹೊತ್ತಿರುವವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸಹೋದ್ಯೋಗಿ ಚಾಲಕರು ನಾಗರಾಜ್ ಅವರಿಗೆ ಸೂಕ್ತ ನ್ಯಾಯ ಮತ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಇಂದು ನೂರಾರು ಬಸ್ ಚಾಲಕರು ಹಾಗೂ ಇತರೆ ಸಿಬ್ಬಂದಿ ಡಿಪೋದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಡಿಪೋದಿಂದ ಬಸ್ಗಳನ್ನು ರೂಟ್ಮೇಲೆ ತೆಗೆದುಕೊಂಡು ಹೋಗದ ಕಾರಣ ಇತ್ತ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಯಿತು.
ಆಗಿರುವುದೇನು?: ಮೊನ್ನೆ ಸೋಮವಾರ ಜೂನ್ 22ರ ತಡರಾತ್ರಿ ಡಿಪೋ ಆವರಣದಲ್ಲಿ ಚಾಲಕ ನಾಗರಾಜ್ ಅವರು ನಡೆದುಕೊಂಡು ಹೋಗುತ್ತಿದ್ದಾಗ ಬಂದ ಬಸ್ ಡಿಕ್ಕಿ ಹೊಡೆದಿದೆ. ಇದು ಟಾಟಾ ಕಂಪನಿಯ ಬಸ್ ಚಾಲಕ ಚಂದ್ರು ಎಂಬಾತ ಬೇಜವಾಬ್ದಾರಿಯಿಂದ ಆಗಿರುವುದೋ ಅಥವಾ ಬಸ್ ಸಮಸ್ಯೆಯಿಂದ ಆಗಿರುವುದೋ ಗೊತ್ತಿಲ್ಲ.
ಆದರೆ ವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ನಾಗರಾಜು ಅವರಿಗೆ ಗುದ್ದಿತು. ಅಪಘಾತದ ತೀವ್ರತೆಗೆ ನಾಗರಾಜ್ ಅವರ ಬಲಗೈ ಮತ್ತು ಎಡಗಾಲು ಸಂಪೂರ್ಣವಾಗಿ ಜಜ್ಜಿಹೋಗಿದ್ದು ಗಂಭೀರ ಗಾಯಗಳಾಗಿವೆ.
ಸದ್ಯ ಆಸ್ಪತ್ರೆಗೆ ದಾಖಲಾಗಿರುವ ನಾಗರಾಜ್ ಅವರಿಗೆ ಈಗಾಗಲೇ ಸುಮಾರು 6 ಶಸ್ತ್ರಚಿಕಿತ್ಸೆಗಳು ನಡೆದಿವೆ ಎಂದು ತಿಳಿದು ಬಂದಿದೆ. ಇತ್ತ ಗಾಯದ ಆಳ ಹೆಚ್ಚಾಗಿರುವುದರಿಂದ ವೈದ್ಯರು ಕನಿಷ್ಠ ಒಂದು ವರ್ಷ ಕಾಲ ಕಡ್ಡಾಯವಾಗಿ ಬೆಡ್ ರೆಸ್ಟ್ ಪಡೆಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
6000 ರೂ. ಕೊಟ್ಟು ಕೈತೊಳೆದುಕೊಂಡರು!: ಘಟನೆ ನಡೆದು ಮೂರು ದಿನಗಳಾಗುತ್ತಾ ಬಂದರೂ ಕೆ.ಆರ್. ಪುರ ಡಿಪೋ -29ರಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಅಪಘಾತ ನಡೆದ ತಕ್ಷಣ ಕೇವಲ 6000 ರೂಪಾಯಿ ನೀಡಿ ಕೈತೊಳೆದುಕೊಂಡಿದ್ದಾರೆ. ಹೀಗೆ ಆದರೆ ನಾವು ಏನು ಮಾಡುವುದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ್ ಅವರ ಕುಟುಂಬಕ್ಕೆ ಈಗ ದಿಕ್ಕೇ ಇಲ್ಲದಂತಾಗಿದೆ. ಒಂದು ವರ್ಷ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅವರ ಸಂಸಾರ ನಿರ್ವಹಣೆ ಹೇಗೆ? ಆಸ್ಪತ್ರೆಯ ಲಕ್ಷಾಂತರ ರೂಪಾಯಿ ಖರ್ಚನ್ನು ಯಾರು ಭರಿಸುತ್ತಾರೆ ಎಂದು ಸಹೋದ್ಯೋಗಿಗಳು ಪ್ರಶ್ನಿಸುತ್ತಿದ್ದಾರೆ.
ಟಾಟಾ ಕಂಪನಿಯಿಂದ ಪರಿಹಾರ ಸಿಗುವವರೆಗೂ ಹೋರಾಟ:
ಅಪಘಾತಕ್ಕೆ ಕಾರಣವಾದ ಟಾಟಾ ಕಂಪನಿಯ ಬಸ್ ಹಾಗೂ ಅದರ ಚಾಲಕನ ಬೇಜವಾಬ್ದಾರಿಯೇ ಈ ದುರಂತಕ್ಕೆ ಕಾರಣವಾಗಿರುವುದರಿಂದ ಟಾಟಾ ಕಂಪನಿಯೇ ನಾಗರಾಜ್ ಕುಟುಂಬಕ್ಕೆ ಸೂಕ್ತ ನಷ್ಟ ಪರಿಹಾರ ನೀಡಬೇಕು ಎಂದು ಸಿಬ್ಬಂದಿಗಳು ಪಟ್ಟು ಹಿಡಿದಿದ್ದಾರೆ.
ಇನ್ನು ಗಾಯಾಳು ಚಾಲಕನಿಗೆ ಸಾರಿಗೆ ಸಂಸ್ಥೆ ಮತ್ತು ಸಂಬಂಧಪಟ್ಟ ಕಂಪನಿ ನ್ಯಾಯ ಒದಗಿಸದಿದ್ದರೆ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಮತ್ತು ಬಸ್ಗಳನ್ನು ರಸ್ತೆಗೆ ಇಳಿಸುವುದಿಲ್ಲ ಎಂದು ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.







