ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಹಾಗೂ ಜೆಡಿಎಸ್ ಸದಸ್ಯ ಎಸ್.ಎಲ್. ಧರ್ಮೇಗೌಡ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದು, ತುಂಬ ನೋವು ತಂದೆ ಎಂದು ಅನೇಕ ಗಣ್ಯರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.
ವಿಧಾನಪರಿಷತ್ ಉಪಸಭಾಪತಿ ಹಾಗೂ ಜೆಡಿಎಸ್ ಮುಖಂಡರಾದ ಎಸ್.ಎಲ್. ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಆಘಾತವಾಗಿದೆ. ಸಜ್ಜನ, ಸನ್ನಡತೆಯ ಉಪಸಭಾಪತಿಗಳನ್ನು ಕಳೆದುಕೊಂಡದ್ದು ನಮ್ಮ ರಾಜ್ಯದ ನಷ್ಟ. ಅವರ ಕುಟುಂಬ ಹಾಗೂ ಬಂಧುಮಿತ್ರರಿಗೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಸಂತಾಪ ಸೂಚಿಸಿದ್ದಾರೆ.
ನಮ್ಮ ಪಕ್ಷದ ಹಿರಿಯ ಮುಖಂಡರು ಹಾಗೂ ನನ್ನ ಸಹೋದರರಂತಿದ್ದ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ಸುದ್ದಿ ತೀವ್ರ ಆಘಾತವನ್ನುಂಟುಮಾಡಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಧರ್ಮೇಗೌಡರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಧಾನಪರಿಷತ್ ಉಪಸಭಾಪತಿ ಶ್ರೀ ಎಸ್.ಎಲ್.ಧರ್ಮೇಗೌಡರ ನಿಧನದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಇದನ್ನು ನಂಬಲಿಕ್ಕೇ ಸಾಧ್ಯವಾಗುತ್ತಿಲ್ಲ. ಶಾಸಕರಾಗಿ, ಉಪಸಭಾಪತಿಗಳಾಗಿ ಜನಮನ್ನಣೆ ಗಳಿಸಿದ್ದ ಅವರ ದುರಂತ ಅಂತ್ಯ ಅತ್ಯಂತ ದುಃಖವನ್ನುಂಟು ಮಾಡಿದೆ. ಹಿರಿಯ ಅಧಿಕಾರಿಗಳಿಂದ ಘಟನೆಯ ವಿವರ ಪಡೆದುಕೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.