- ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಅನಾರೋಗ್ಯ ಮಹಿಳೆ ಕರೆದುಕೊಂಡು ಹೋಗಲು ಬಂದ ಆಂಬುಲೆನ್ಸ್ ಕೆಟ್ಟುನಿಂತ ಪರಿಣಾಮ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಯಾಚೇನಹಳ್ಳಿ ನಡೆದಿದೆ.
ತಾಲೂಕಿನ ಬನ್ನೂರು ಹೋಬಳಿ ಯಾಚೇನಹಳ್ಳಿಯ ಬೋರಮ್ಮ (55) ಮೃತಪಟ್ಟವರು. ಜನರ ಸೇವೆಗಾಗಿ ಇರುವ ಆಂಬುಲೆನ್ಸ್ ಅನ್ನು ಸರಿಯಾಗಿ ನಿರ್ವಹಣೆ ಮಾಡದೆ ಇದ್ದಿದ್ದರಿಂದ ಮಹಿಳೆಯೊಬ್ಬರ ಜೀವ ಬಲಿಯಾಗಿದೆ.
ಡಿ.28ರಂದು ಬೋರಮ್ಮ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೆ ಚಿಕಿತ್ಸೆಗೆ ಕರೆದೊಯ್ಯಲು 108 ಆಂಬುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದರು.
ಬೋರಮ್ಮ ಅವರನ್ನು ಕರೆದೊಯ್ಯಲು ಸ್ಥಳಕ್ಕಾಗಮಿಸಿದ ಆಂಬುಲೆನ್ಸ್ ಅಲ್ಲೇ ಕೆಟ್ಟು ನಿಂತಿದೆ. ಈ ವೇಳೆ ಆಂಬುಲೆನ್ಸ್ ಚಾಲಕ ಎಷ್ಟೇ ಪ್ರಯತ್ನ ಪಟ್ಟರು ಅದು ಸರಿಯೋಗದ ಕಾರಣ. ಅವರನ್ನು ಬೇರೆ ಖಾಸಗಿ ವಾಹನದಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ತಡವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಪರಿಣಾಮ ಬೋರಮ್ಮ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಆರೋಗ್ಯ ಇಲಾಖೆಯ ಇಂಥ ನಿರ್ಲಕ್ಷಕ್ಕೆ ಬೋರಮ್ಮ ಅವರ ಜೀವ ಬಲಿಯಾಗಿದ್ದು, ಕೆಟ್ಟುನಿಂತ ಆಂಬುಲೆನ್ಸ್ ಚಾಲಕನ ವಿರುದ್ಧವೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.