- ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಬ್ರಿಟನ್ ಕೊರೊನಾ ರಾಜ್ಯಾದ್ಯಂತ ಆವರಿಸುತ್ತಿರುವ ಹೊತ್ತಿನಲ್ಲಿ ಇತ್ತ ಹೊಸ ವರ್ಷ ಆಚರಣೆಗೆ ಯುವ ಜನಾಂಗ ಮುಂದಾಗುತ್ತಿದೆ. ಆದರೆ, ಎಲ್ಲಿ ಈ ಹೊಸ ವೈರಸ್ ಆವರಿಸುತ್ತೋ ಎಂಬ ಭಯದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೈಗೊಂಡಿದೆ.
ಕೊರೊನಾ ಮತ್ತೆ ಹೆಚ್ಚುತ್ತಿರುವುದರಿಂದ ಈ ಬಾರಿಯ ಹೊಸ ವರ್ಷ ಸಮಭ್ರಮಕ್ಕೂ ಬ್ರೇಕ್ ಬಿದ್ದಿದೆ. ಬೆಂಗಳೂರು ಮಾತ್ರವಲ್ಲದೆ ಮೈಸೂರಿನಲ್ಲಿ ಕೂಡ 2021ರ ಹೊಸ ವರ್ಷ ಆಚರಣೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಅಂದರೆ ಇಂದು ರಾತ್ರಿ 11.30ರೊಳಗೆ ಎಲ್ಲ ಕಾರ್ಯಕ್ರಮ ಮುಗಿಸಬೇಕು. ಹೋಟೆಲ್, ರೆಸ್ಟೋರೆಂಟ್, ಪಬ್ ಅಂಗಡಿ, ಮುಗ್ಗಟ್ಟುಗಳನ್ನು ಮುಚ್ಚಬೇಕು ಎಂದು ಈಗಾಗಲೇ ಎಲ್ಲ ಅಧಿಕಾರಿಗಳನ್ನೂ ಕರೆದು ಸೂಚನೆ ನೀಡಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಜನವರಿ 2ರ ಸಂಜೆಯವರೆಗೂ ಚಾಮುಂಡಿ ಬೆಟ್ಟಕ್ಕೆ ತೆರಳುವವರಿಗೆಲ್ಲಿ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಮೈಸೂರಿನಲ್ಲಿ ಇಂದು ರಾತ್ರಿ ಡಿಜೆ, ಡ್ಯಾನ್ಸ್ ಸೇರಿ ಯಾವುದೇ ಕಾರ್ಯಕ್ರಮ ಮಾಡಬಾರದೆಂದು ಸೂಚಿಸಲಾಗಿದೆ. ರಸ್ತೆಯಲ್ಲಿ ಎಲ್ಲೂ ಕೂಡ ಪಾರ್ಟಿ ಮಾಡುವ ಹಾಗಿಲ್ಲ. ರಸ್ತೆಯಲ್ಲಿ ಓಡಾಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುಯದಕ್ಕೆ, ಮನರಂಜನೆಗೂ ಅವಕಾಶ ಇಲ್ಲ. ಜತೆಗೆ ಈ ದಿನವನ್ನು ವಿಶೇಷ ದಿನ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ. 5ಕ್ಕೂ ಹೆಚ್ಚು ಮಂದಿ ಸೇರದಂತೆ ಸೂಚನೆ ನೀಡಲಾಗಿದೆ. ಮೈಸೂರಿನ ಎಲ್ಲ ಠಾಣಾಧಿಕಾರಿಗಳನ್ನು ಆಯಾ ವ್ಯಾಪ್ತಿಗೆ ಗಸ್ತಿಗೆ ನೀಯೋಜನೆ ಮಾಡಲಾಗಿದೆ ಎಂದು ಮೈಸೂರು ಕಾನೂನು ಸುವ್ಯವಸ್ಥೆ ಡಿಸಿಪಿ ಪ್ರಕಾಶ್ ಗೌಡ ವಿವರಿಸಿದ್ದಾರೆ.
ಮೈಸೂರಿನಲ್ಲಿ ಹೊಸ ವರ್ಷಾಚರಣೆಗೆ ಹೊಸ ನಿಯಮಾವಳಿ ಜಾರಿಗೊಳಿಸಲಾಗಿದೆ. ಮೈಸೂರಿನಲ್ಲಿ ಹೊಸ ವರ್ಷಾಚರಣೆಯ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಡಿ. 31ರ ರಾತ್ರಿ ಮೈಸೂರಿನ ಹಲವು ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮೈಸೂರು ಅರಮನೆಯಲ್ಲೂ ಹೊಸ ವರ್ಷ ಸ್ವಾಗತ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಜ. 1ರಂದು ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧಿಸಲಾಗಿದ್ದು, ಉಳಿದಂತೆ ಪ್ರವಾಸಿ ತಾಣಗಳಿಗೆ ಕೋವಿಡ್ ಮಾರ್ಗಸೂಚಿಯನ್ವಯ ಪ್ರವೇಶಾವಕಾಶ ನೀಡಲಾಗುವುದು. ಮೈಸೂರಿನ ಅರಮನೆ, ಮೃಗಾಲಯ, ನಂಜನಗೂಡು ದೇವಾಲಯಗಳಿಗೆ ಪ್ರವೇಶಾವಕಾಶ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಮೈಸೂರು ಜಿಲ್ಲಾಡಳಿತ ಹೊಸ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ.