ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕಾರ್ಯಕರ್ತರು, ಅಭಿಮಾನಿಗಳಿಂದ ಜೆಡಿಎಸ್ ಪಕ್ಷ ಸದೃಢವಾಗಿದೆಯೇ ಹೊರತು ದೊಡ್ಡದೊಡ್ಡನಾಯಕರ ತ್ಯಾಗದಿಂದಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿ, ಇಂದು ಸಹ ನಮ್ಮ ಮನೆಗೆ ಸಾಕಷ್ಟು ಕಾರ್ಯಕರ್ತರು ಬರ್ತಾರೆ. ಹಾಗೇ ಬರುವ ಎಷ್ಟೋ ಕಾರ್ಯಕರ್ತರು ನಮ್ಮಿಂದ ಯಾವುದೇ ಉಪಯೋಗ ಪಡೆದಿಲ್ಲ. ಆದರೆ ಜೆಡಿಎಸ್‌ನಿಂದ ಉಪಯೋಗ ಪಡೆದವರು ಆಡುವ ಮಾತು ನೋವುಂಟು ಮಾಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ದೊಡ್ಡ ದೊಡ್ಡ ನಾಯಕರ ಬಗ್ಗೆ ಚರ್ಚೆ ಮಾಡಲ್ಲ. ಪಕ್ಷಕ್ಕೆ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳಿದ್ದಾರೆ ಅವರ ಆಶೀರ್ವಾದದಿಂದಲೇ ಮುಂದಿನ ಬಾರಿಗೆ ನಮ್ಮ ಪಕ್ಷ ರಾಜ್ಯದಲ್ಲಿಅಧಿಕಾರಕ್ಕೆ ಬರಲಿದೆ ಎಂದರು.
ಇನ್ನು ನಮ್ಮ ಪಕ್ಷದಿಂದ ಸಾಕಷ್ಟು ನಾಯಕರು ಹೊರಹೋಗಿದ್ದಾರೆ. ಅದಕ್ಕೆಲ್ಲ ದೇವೇಗೌಡರ ಕುಟುಂಬ ಕಾರಣವಲ್ಲ. ಸಿದ್ದರಾಮಯ್ಯ ಪಕ್ಷ ಬಿಟ್ಟು ಹೋದ್ರು. ಅದಕ್ಕೆ ನಾನು ಕಾರಣ ಅಂತ ಹೇಳ್ತಾರೆ. ಸಿದ್ದರಾಮಯ್ಯ ಪಕ್ಷ ಬಿಡೋಕ್ಕೆ ನಾನು ಕಾರಣ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.
1969ರಲ್ಲಿ ಕಾಂಗ್ರೆಸ್ ಇಬ್ಬಾಗವಾಗಿತ್ತು. ಆಗ ದೇವೇಗೌಡರು ಪಕ್ಷೇತರ ಶಾಸಕರಾಗಿದ್ದರು. ಅಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಕಾಂಗ್ರೆಸ್ನಿಂದ 24 ಶಾಸಕರು ಆಯ್ಕೆಯಾಗಿದ್ದರು. ದೇವೇಗೌಡರಿಗೆ ಪ್ರತಿಪಕ್ಷ ನಾಯಕನ ಸ್ಥಾನ ಕೊಟ್ಟಿದ್ದರು ಎಂದು ಸ್ಮರಿಸಿಕೊಂಡರು.
ಇನ್ನು ದೇವರಾಜ ಅರಸು ಕಾಂಗ್ರೆಸ್ ತೊರೆದಿದ್ದರು. ಅಂದೇ ಇಂದಿರಾ ಗಾಂಧಿ ದೇವೇಗೌಡರಿಗೆ ಒತ್ತಡ ಹಾಕಿದ್ದರು. ಪಕ್ಷಕ್ಕೆ ಬನ್ನಿ, ಸಿಎಂ ಮಾಡ್ತೇವೆ ಅಂತ ಹೇಳಿದ್ದರು. ಆದರೆ ದೇವೇಗೌಡರು ಒಪ್ಪಲಿಲ್ಲ. ಗುಂಡೂರಾವ್ ಮುಖ್ಯಮಂತ್ರಿಯಾದರು. ದೇವೇಗೌಡರು ಆಗ ಜೆಡಿಎಸ್ ಪಕ್ಷ ಸಂಘಟಿಸಿದರು. ಇಂಥ ಪಕ್ಷವನ್ನು ಬಿಜೆಪಿಯೊಂದಿಗೆ ಸೇರಿಸುತ್ತಿದ್ದಾರೆ ಎಂಬ ಅಪಪ್ರಚಾರ ಯಾಕೆ ಮಾಡುತ್ತಿದ್ದಾರೆ ಎಂಬುವುದೇ ಗೊತ್ತಾಗ್ತಿಲ್ಲ ಎಂದರು.
ಹಿಂದೆ ನಾನು ಗೌಡರ ವಿರುದ್ಧ ಹೋಗಿ ಸಿಎಂ ಆಗಲಿಲ್ಲ. ಅಂದು ನೋವು ಕೊಟ್ಟು ನಾನು ಆ ತೀರ್ಮಾನ ಮಾಡಿದ್ದೆ. ಪಕ್ಷ ಉಳಿಸುವ ದೃಷ್ಟಿಯಿಂದ ನಾನು ಆ ಕೆಲಸ ಮಾಡಿದ್ದೆ. ವಿರೋಧ ಪಕ್ಷದವರು ಡ್ರಾಮಾ ಆರ್ಟಿಸ್ಟ್ ಅಂದ್ರು. ಬಿಜೆಪಿಗೆ ಹೋದರೂ ನನ್ನ ತನ ಬಿಟ್ಟುಕೊಡಲಿಲ್ಲ ಎಂದು ಹೇಳಿದರು.
ಮೈತ್ರಿ ಸರ್ಕಾರ ಹೋದ ನಂತರ ನೆರೆ ಬಂತು. ಆಗ ನಾನು ಬೆಳಗಾವಿಯಿಂದ ಪ್ರವಾಸ ಮಾಡಿ ಜನರಿಗೆ ಆದಷ್ಟು ಸಹಾಯ ಮಾಡಿದ್ದೀವಿ. ಕೊರೊನಾ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರೋಕ್ಕೆ ಆಗಲಿಲ್ಲ. ನಾವು ಜನರಿಗೆ ಯಾವುದೇ ಸಹಾಯ ಮಾಡೊಕ್ಕೆ ಆಗಲಿಲ್ಲ. ಉಪ ಚುನಾವಣೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನಾನು ಹಿಂದೆ ಜನತಾ ಪರಿವಾರ ಒಂದು ಮಾಡುವ ಪ್ರಯತ್ನ ಸಹ ಮಾಡಿದ್ದೀನಿ ಎಂದರು.