ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮೊದಲು ದೇಶದಿಂದ ಗೋ ಮಾಂಸ ರಫ್ತು ಮಾಡೋದನ್ನು ನಿಲ್ಲಿಸಿ. ಜತೆಗೆ ಇಡೀ ದೇಶದಲ್ಲಿ ಗೋಹತ್ಯೆ ನಿಷೇಧ ಮಾಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಿಪಕಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ನಿವಾಸದಲ್ಲಿ ಇಂದು ಬಿಜೆಪಿ ಸರ್ಕಾರದ ಐದು ಜನ ವಿರೋಧಿ ಕಾಯ್ದೆಗಳ ಕುರಿತ ಕಿರು ಪುಸ್ತಕ ಬಿಡುಗಡೆ ಮಾಡಿ, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯವರು ಸಗಣಿ ಎತ್ತಿಲ್ಲ, ಗಂಜಲ ಬಾಚಿಲ್ಲ. ಆದರೆ ಗೋಮಾತೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿ ಬೆಂಬಲಿಗರೇ ದನದ ಮಾಂಸ ರಫ್ತು ಮಾಡುತ್ತಾರೆ. ಬಿಜೆಪಿಯದ್ದು ದರಿದ್ರ ಸರ್ಕಾರ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ಐದು ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸುಳ್ಳು ಯಾವುದು ಸತ್ಯ ಯಾವುದು ಎಂಬ ಅಂಶಗಳನ್ನು ಸೇರಿಸಿ ನಾವು ಒಂದು ಕಿರು ಪುಸ್ತಕವನ್ನು ಹೊರ ತಂದಿದ್ದೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆ 2020, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ರೈತರೊಂದಿಗೆ ಕೃಷಿ ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಕಾಯ್ದೆಗಳ ಸರಿ -ತಪ್ಪುಗಳ ಅಂಶಗಳನ್ನು ಲಗತ್ತಿಸಿರುವ ಕಿರು ಹೊತ್ತಿಗೆ ಇದಾಗಿದೆ ಎಂದರು.
ಬಿಜೆಪಿ ಸರ್ಕಾರದ ಈ ಜನ ವಿರೋಧ ಕಾಯ್ದೆಗಳನ್ನು ಇಟ್ಟುಕೊಂಡು ಶೀಘ್ರದಲ್ಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಈ ವರ್ಷ ಸಂಘರ್ಷದ ವರ್ಷ. ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜ. 18ರವರೆಗೂ ಪಕ್ಷದ ಕಾರ್ಯಕ್ರಮ ಇದೆ. ನಂತರ ಪಕ್ಷದಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇದಕ್ಕಾಗಿ ಜೈಲಿಗೆ ಹೋಗೋಕೂ ಸಿದ್ಧ. ಮೊದಲು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಹೊಸ ಕಾಯ್ದೆಯಿಂದ ಅದಾನಿಯಂಥವರು ಬೇಕಾದರೂ ಕೃಷಿ ಭೂಮಿಯನ್ನು ತೆಗೆದುಕೊಳ್ಳಬಹುದು. ಇದು ಪ್ರವಾಹದ ಗೇಟನ್ನು ಓಪನ್ ಮಾಡಿದ ಹಾಗೆ. ಇದರಿಂದ ಕೃಷಿ ಭೂಮಿ ರಿಯಲ್ ಎಸ್ಟೇಟ್, ಮೋಜು ಮಸ್ತಿಗೆ ಉಪಯೋಗವಾಗುತ್ತದೆ ಎಂದು ಕಿಡಿಕಾರಿದರು.
ಬಿಜೆಪಿಯ ಕಾಯ್ದೆಗಳ ಬಗ್ಗೆ ವಿಪಕ್ಷವಾಗಿರುವ ಕಾಂಗ್ರೆಸ್ ನಿಲುವೇನು ಅನ್ನೋದನ್ನು ಇದರಲ್ಲಿ ಉಲ್ಲೇಖ ಮಾಡಿದ್ದೇವೆ. ಸುಗ್ರೀವಾಜ್ಞೆ ತರುವುದು ಅಗತ್ಯ ಮತ್ತು ಅನಿವಾರ್ಯತೆ ಇದ್ದಾಗ ಮಾತ್ರ. ಆದರೆ, ಯಾವುದೇ ಅಗತ್ಯವಿಲ್ಲದಿದ್ದರೂ ಬಿಜೆಪಿ ಸರ್ಕಾರ ಎಲ್ಲ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿದೆ. ಈ ಮೂಲಕ ಸರ್ಕಾರ ರೈತರನ್ನು ನಾಶ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ರಾಸು 12 ವರ್ಷವಾದ ನಂತರ ಮುದಿಯಾಗುತ್ತದೆ. ಕರು ಹಾಕದ ಮುದಿ ಹಸುವನ್ನು ಸಾಕಲು ಕಷ್ಟವಾಗುತ್ತದೆ. ಒಂದು ಹಸುಗೆ 7 ಕೆಜಿ ಹುಲ್ಲು ಬೇಕಾಗುತ್ತದೆ. ಬಿಜೆಪಿಯವರು ದರಿದ್ರದವರು. ನೀನು ತಂದಾಕು ನಾನು ಉಂಡಾಕ್ತೀನಿ’ ಅನ್ನೋ ಜಾಯಮಾನ ಬಿಜೆಪಿಯವರದ್ದು. ಗೋ ಹತ್ಯೆ ನಿಷೇಧದಿಂದ ಹಳ್ಳಿಯ ರೈತರ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ನರೇಂದ್ರ ಮೋದಿ ಅವರು ಗ್ಯಾಸ್ ಮತ್ತು ಪೆಟ್ರೋಲ್ ಬಗ್ಗೆ ಮಾತನಾಡುವುದಿಲ್ಲ. ಇವರು ಬರುವ ಮುನ್ನ 300 ರೂಪಾಯಿ ಗ್ಯಾಸ್ ರೇಟ್ ಇತ್ತು. ಈಗ 700 ರೂ. ಆಗಿದೆ ಎಂದು ಪ್ರಧಾನಿ ವಿರುದ್ಧವೂ ವಾಗ್ದಾಳಿ ನಡೆಸಿದರು.