ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬಿಬಿಎಂಪಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆ, ಮನೆಗೆ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಯನ್ನು ಡಾ.ವಿಷ್ಣುವರ್ಧನ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆಸಿ ಕೊಳ್ಳೆ ಹೊಡೆದಿದ್ದಾರೆ. ಬಿಬಿಎಂಪಿಯಲ್ಲಿ ಯಾವುದೇ ಚುನಾಯಿತ ಪಕ್ಷವಿಲ್ಲದೆ ಬೆಂಗಳೂರಿನ ಜನತೆಯ ಗೋಳನ್ನು ಕೇಳುವವರಿಲ್ಲ, ಆದ ಕಾರಣ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆ, ಮನೆಗೆ ತಲುಪಿಸುವ ಅಭಿಯಾನ ಮಾಡಲಿದ್ದೇವೆ ಎಂದು ಹೇಳಿದರು.
ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇ. 70 ರಷ್ಟು ಬೆಂಗಳೂರಿನ ಜನತೆ ದೆಹಲಿ ಮಾದರಿ ಆಮ್ ಆದ್ಮಿ ಪಕ್ಷದ ಸರ್ಕಾರ ಬೆಂಗಳೂರಿಗೆ ಬೇಕು ಎಂದು ತಿಳಿಸಿದ್ದಾರೆ. ಈ ನಂಬಿಕೆಯನ್ನು ನಾವು ಅಧಿಕಾರಕ್ಕೆ ಬಂದರೆ ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
https://www.facebook.com/AAPKarnataka/posts/2197664810366711
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶರತ್ ಖಾದ್ರಿ ಮಾತನಾಡಿ, ದೊಡ್ಡ ವಿಧಾನಸಭಾ ಕ್ಷೇತ್ರವಾದ ಈ ಭಾಗದಲ್ಲಿ ಸಣ್ಣ ಬುದ್ಧಿಯ ರಾಜಕಾರಣಿಗಳು ಸೇರಿಕೊಂಡು ಇಡೀ ಕ್ಷೇತ್ರವನ್ನು ಹಾಳುಗೆಡವಿದ್ದಾರೆ. ಕನಿಷ್ಠ ಸಮಸ್ಯೆಗಳಿಗೂ ಸ್ಪಂದಿಸದ ದಪ್ಪ ಚರ್ಮದ ರಾಜಕಾರಣಿಗಳನ್ನು ಬದಲಾಯಿಸಿ, ಬೆಂಗಳೂರನ್ನು ಉಳಿಸಿ ಎಂದು ಮನವಿ ಮಾಡಿದರು.
ಈ ಅಭಿಯಾನದ ಮೂಲಕ ಪ್ರತಿ ನಾಗರಿಕರ ಮನೆ, ಮನೆಗೆ ಭೇಟಿ ನೀಡಿ ಸರ್ಕಾರದ ಹಾಗೂ ಬಿಬಿಎಂಪಿಯ ವೈಫಲ್ಯಗಳನ್ನು ತಿಳಿಸಲಾಗುವುದು. ಮೂರು ಪಕ್ಷಗಳಿಗಿಂತ ಆಮ್ ಆದ್ಮಿ ಪಕ್ಷ ಹೇಗೆ ಭಿನ್ನ ಎಂದು ಮನವರಿಕೆ ಮಾಡಿಕೊಡಲಾಗುವುದು ಎಂದರು.
ಅಭಿಯಾನದಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಬೆಂಗಳೂರು ಉಪಾಧ್ಯಕ್ಷ ನಾಗಣ್ಣ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.