ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಬಿಜೆಪಿ ಹೈಕಮಾಂಡ್ ಬುಲಾವ್ ಮೇರೆಗೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರ ಅವರೊಂದಿಗೆ ದೆಹಲಿಗೆ ಬಂದಿದ್ದರು. ಈ ವೇಳೆ ಅಮಿತ್ ಶಾ ಅವರು ನಾಯಕತ್ವ ಬದಲಾವಣೆಯ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಿಎಸ್ವೈ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಅಮಿತ್ ಶಾ ಅವರು ನೇರವಾಗಿ ನಾಯಕತ್ವ ಬದಲಾವಣೆಯ ವಿಷಯ ಪ್ರಸ್ತಾಪ ಮಾಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಮುಖ್ಯಮಂತ್ರಿ ಹುದ್ದೆ ತ್ಯಜಿಸಿದರೆ ಪರ್ಯಾಯವಾಗಿ ರಾಜ್ಯಪಾಲರ ಹುದ್ದೆ. ಮತ್ತು ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಕರ್ನಾಟಕದ ಕೋಟಾ ತುಂಬಲು ಚಿಂತನೆ ನಡೆಸಲಾಗಿದೆ. ಹೀಗಾಗಿ ಆ ಕೋಟಾದಡಿ ಪುತ್ರ ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಮುಂದಿನ ವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗಲಿದೆಯೇ ಎಂಬ ಕುತೂಹಲವು ರಾಜ್ಯ ಬಿಜೆಪಿಗರಲ್ಲಿ ಹೆಚ್ಚಾಗಿದೆ.
ಇನ್ನು ಈ ಬಗ್ಗೆ ಶೀಘ್ರದಲ್ಲೇ ತಮ್ಮ ನಿರ್ಧಾರ ತಿಳಿಸುವಂತೆಯೂ ಯಡಿಯೂರಪ್ಪ ಅವರಿಗೆ ಸೂಚನೆ ನೀಡಲಾಗಿದೆ. ಆದರೆ, ಅಮಿತ್ ಶಾ ಇಟ್ಟ ಈ ಪ್ರಸ್ತಾವನೆಯಿಂದ ಬಿಎಸ್ವೈ ಶಾಕ್ ಆಗಿದ್ದು, ಅಮಿತ್ ಶಾ ನಿವಾಸದಿಂದ ತೆರಳುವಾಗ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹಾಗೆ ತೆರಳಿದರು.
ಬಳಿಕ ಪುತ್ರ ವಿಜಯೇಂದ್ರ ಜತೆಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ನಾಯಕತ್ವ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಆ ಗೊಂದಲ ಇರುವುದು ಮಾಧ್ಯಮದಲ್ಲಿ ಮಾತ್ರ ಎಂದಷ್ಟೇ ಹೇಳಿ ಹೊರಟಿದ್ದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿದೆ.