NEWSನಮ್ಮರಾಜ್ಯರಾಜಕೀಯ

ರಾಜ್ಯದ ಜನ ಕೈ ಹಿಡಿಯದಿದ್ದರೇ ಅದೇ ನನ್ನ ಕೊನೇ ರಾಜಕೀಯ ಹೋರಾಟ : ಭಾವುಕರಾದ ಎಚ್‌ಡಿಕೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ರಾಮನಗರ: ನಾನು ಮುಖ್ಯಮಂತ್ರಿಯಾದ ಅಲ್ಪಕಾಲದಲ್ಲೇ ನಾಡಿನ ಜನರ ಬಹುಬೇಡಿಕೆಗಳನ್ನು ಈಡೇರಿಸಿದ್ದೇನೆ ಆ ಭರವಸೆಯಿಂದಲೇ ಹೇಳುತ್ತಿದ್ದೇನೆ ರಾಜ್ಯದಲ್ಲಿ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ಕೈಬಿಡುವುದಿಲ್ಲ. ಒಂದು ವೇಳೆ ಕೈ ಬಿಟ್ಟರೆ ಅದೇ ನನ್ನ ಜೀವನದ ಕೊನೆಯ ರಾಜಕೀಯ ಹೋರಾಟ ಆಗಿರಲಿದೆ ಎಂದು ಭಾವುಕರಾಗಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನುಡಿದರು.

ನಗರದ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾಮನಗರ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದವರು ಮತ್ತು ಪರಾಭವಗೊಂಡವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಜತೆ ಕೈ ಜೋಡಿಸಿ ಮೈತ್ರಿ ಸರ್ಕಾರ ರಚನೆ ಮಾಡಿದ್ದರಿಂದ ಆದ ತಪ್ಪಿನ ಅರಿವಾಗಿದೆ. ದೋಸ್ತಿ ಸರ್ಕಾರಕ್ಕೆ ಬಂಡೆ ರೀತಿ ಆಸರೆಯಾಗಿ ನಿಂತಿದ್ದೇವೆ ಎಂದು ಪರೋಪಕಾರ ಮಾಡಿದವರಂತೆ ಪ್ರಚಾರ ಪಡೆದವರೇ ನನ್ನ ಮೇಲೆ ಕಲ್ಲು ಚಪ್ಪಡಿ ಎಳೆದರು ಎಂದು ಹೇಳಿದರು.

ಮೈತ್ರಿ ಸರ್ಕಾರದ ಅವಧಿಯನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಮುಖಂಡರು ಜೆಡಿಎಸ್ ಬಲಿಷ್ಠವಾಗಿದ್ದ ಕ್ಷೇತ್ರಗಳಲ್ಲಿಯೇ ತಮ್ಮ ಪ್ರಾಬಲ್ಯ ಕಂಡುಕೊಳ್ಳಲು ವೇದಿಕೆ ಸಿದ್ಧಪಡಿಸಿಕೊಂಡರು. ಇದರಿಂದಾಗಿ ಪಕ್ಷಕ್ಕೆ ಈಚಿನ ಚುನಾವಣೆಗಳಲ್ಲಿ ಹಿನ್ನಡೆ ಆಗುತ್ತಿದೆ. ನಾವು ಮಾಡಿದ ಲೋಪಗಳಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೋಷಿಗಳಿಲ್ಲ. ನನ್ನಿಂದಾಗಿರುವ ತಪ್ಪಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇನೆ ಎಂದರು.

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‍ ಅನ್ನು ಅಧಿಕಾರಕ್ಕೆ ತರಲು ಈಗಿನಿಂದಲೇ ಶ್ರಮಿಸುತ್ತೇನೆ. ಸಂಕ್ರಾಂತಿ ಮರುದಿನ ರಾಮನಗರ ಕ್ಷೇತ್ರದಿಂದಲೇ ಅದಕ್ಕೆ ಚಾಲನೆ ನೀಡುತ್ತೇನೆ. ರಾಮನಗರ ನನಗೆ ರಾಜಕೀಯವಾಗಿ ಪುನರ್ ಜನ್ಮ ನೀಡಿದ ಕ್ಷೇತ್ರ. ಹೀಗಾಗಿ ಜಾಲಮಂಗಲದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನನ್ನಿಂದಾಗಿರುವ ಅಪಚಾರ ಮನ್ನಿಸುವಂತೆ ಕುಟುಂಬ ಸಮೇತರಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ರಾಜಕೀಯ ಪ್ರಾರಂಭಿಸುತ್ತೇನೆ ಎಂದರು.

ನಿಮ್ಮೂರಿನಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳಿಗೆ ಹಣ ಬೇಕಾದರೆ ನಾನು ಭಿಕ್ಷೆ ಬೇಡಿ ತಂದು ಕೊಡುತ್ತೇನೆ. ದಯಮಾಡಿ ಲೂಟಿಕೋರರು ನೀಡುವ ಪಾಪದ ಹಣಕ್ಕೆ ಮಾರಿಕೊಂಡು ಕ್ಷೇತ್ರದ ಹೆಸರಿಗೆ ಕಳಂಕ ತರುವ ಕೆಲಸ ಮಾಡಬೇಡಿ. ನಾನೊಬ್ಬ ಅಯೋಗ್ಯ ಶಾಸಕನಾಗಿದ್ದರೆ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ. ನಮ್ಮಿಂದಾಗಿರುವ ತಪ್ಪುಗಳನ್ನು ಹೇಳಿದರೆ ತಿದ್ದಿಕೊಳ್ಳುತ್ತೇವೆ. ಪಾಪದ ಹಣ ಪಡೆದು ಕ್ಷೇತ್ರದ ಹೆಸರನ್ನು ಕೆಡಿಸಬೇಡಿ ಎಂದು ಮನವಿ ಮಾಡಿದರು.

ಇನ್ನು ಮುಂದೆ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ. ಕೇತಗಾನಹಳ್ಳಿ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಹವಾಲು ಆಲಿಸುತ್ತೇನೆ. ಸಂಕ್ರಾಂತಿ ನಂತರ ಪ್ರತಿ ಹೋಬಳಿಗೆ ಭೇಟಿ ನೀಡುತ್ತೇನೆ ಎಂದರು.

‘ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿನ ಭಿನ್ನಾಭಿಪ್ರಾಯ ಬೆಂಬಲಿತರ ಸೋಲಿಗೆ ಕಾರಣವಾಗಿದೆ. ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಾನೇ ಪ್ರಚಾರದ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದರು.

ರಾಜ್ಯ ಜೆಡಿಎಸ್ ವಕ್ತಾರ ಬಿ.ಉಮೇಶ್, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಸುಬ್ಬಶಾಸ್ತ್ರಿ, ದೊರೆಸ್ವಾಮಿ, ಪ್ರಾಣೇಶ್, ಎಚ್.ಸಿ.ರಾಜು, ಅಜಯ್ ದೇವೇಗೌಡ, ರಾಮಕೃಷ್ಣ, ಶಂಕರಪ್ಪ ಇದ್ದರು.

ಒಗ್ಗಟ್ಟಿನಿಂದ ಚುನಾವಣೆ ಎದುರಿಸೋಣ
ಜೆಡಿಎಸ್ ನ ಮುಖಂಡರು ಹಾಗೂ ಕಾರ್ಯಕರ್ತರು ವಾರದಲ್ಲಿ ಎರಡು ದಿನ ಜನರ ಮನೆ ಬಾಗಿಲಿಗೆ ತೆರಳಿ ಪಕ್ಷದ ಸಾಧನೆ ಹಾಗೂ ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಸಲಹೆ ನೀಡಿದರು.

ಅಭ್ಯರ್ಥಿ ನಾನಲ್ಲ: ನಿಖಿಲ್‌ ಸ್ಪಷ್ಟನೆ
ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಅಭ್ಯರ್ಥಿಯಲ್ಲ. ರಾಜಕೀಯ ಅಧಿಕಾರದ ಉದ್ದೇಶದಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಬಂದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದ ನಿರೂಪಕರು ಭಾವಿ ಶಾಸಕರಾದ ನಿಖಿಲ್ ಮಾತನಾಡಬೇಕು ಎಂದು ಹೇಳಿದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ನಿಖಿಲ್‌, ಕಾರ್ಯಕರ್ತರು ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಮನವಿ ಮಾಡಿದರು. ತಾತ ದೇವೇಗೌಡರು, ತಂದೆ ಕುಮಾರಸ್ವಾಮಿ, ತಾಯಿ ಅನಿತಾರಿಗೆ ರಾಜಕೀಯ ನೆಲೆ ಕೊಟ್ಟ ಕ್ಷೇತ್ರವಿದು. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವುದು ನನ್ನ ಜವಾಬ್ದಾರಿ’ ಎಂದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...