ಚೆನ್ನೈ: ನಾನು ರಾಜಕೀಯ ಪ್ರವೇಶಿಸುವ ಮಾತೇ ಇಲ್ಲ. ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ನನ್ನ ಮನ ನೋಯಿಸಬೇಡಿ ಎಂದು ನಟ ರಜಿನಿಕಾಂತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರಜಿನಿಕಾಂತ್ ತಮ್ಮ ನಿರ್ಧಾರವನ್ನು ಹಿಂಪಡೆದು ರಾಜಕೀಯಕ್ಕೆ ಧುಮುಕ ಬೇಕೆಂದು ಒತ್ತಾಯಿಸಿ ಅವರ ಅಭಿಮಾನಿಗಳು ಭಾನುವಾರ ಧರಣಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಈ ನಿರ್ಧಾರ ಮರು ಪರಿಶೀಲಿಸುವ ಮಾತೇ ಇಲ್ಲ, ದಯ ವಿಟ್ಟು ಈ ರೀತಿಯ ಪ್ರತಿಭಟನೆಗಳನ್ನು ನಡೆಸಬೇಡಿ ಎಂದು ಹೇಳಿದ್ದಾರೆ.
ನನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿಯಾಗಿದೆ. ಅದಕ್ಕೆ ಕಾರಣ ಏನು ಎಂಬುದನ್ನೂ ವಿವರಿಸಿದ್ದೇನೆ. ಧರಣಿ ನಡೆಸುವ ಮೂಲಕ ನನ್ನ ಮೇಲೆ ಒತ್ತಡ ಹೇರಬೇಡಿ. ಆ ಮೂಲಕ ನನಗೆ ಪದೇ ಪದೇ ನೋವು ಕೊಡಬೇಡಿ’ ಎಂದು ಅವರು ಟ್ವೀಟ್ ಮೂಲಕ ಕೋರಿಕೊಂಡಿದ್ದಾರೆ.
‘ಬಹಳ ಶಿಸ್ತು ಮತ್ತು ಸಹನೆಯಿಂದ ನೀವು ಧರಣಿ ನಡೆಸಿದ್ದೀರಿ. ಇದು ಸಂತಸ ನೀಡಿದೆ. ರಜನಿ ಮಕ್ಕಳ್ ಮಂಡ್ರಂ (ಆರ್‌ಎಂಎಂ) ಅಭಿಮಾನಿ ಸಂಘದ ಸದಸ್ಯರು ಈ ಧರಣಿಯಲ್ಲಿ ಪಾಲ್ಗೊಂ ಡಿಲ್ಲ. ಅದಕ್ಕಾಗಿ ಅವರಿಗೆ ಆಭಾರಿಯಾಗಿದ್ದೇನೆ ಎಂದೂ ತಿಳಿಸಿದ್ದಾರೆ.
ಆರೋಗ್ಯ ಹದಗೆಟ್ಟಿರುವುದರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ ರಾಜಕೀಯ ಪಕ್ಷ ಸ್ಥಾಪಿಸುವ ಆಲೋಚನೆಯನ್ನು ಕೈಬಿಟ್ಟಿದ್ದೇನೆ ಎಂದು ಅವರು ಡಿಸೆಂಬರ್ 29ರಂದು ಪ್ರಕಟಿಸಿದ್ದರು. ಈ ನಿರ್ಧಾರದಿಂದ ಅಭಿಮಾನಿಗಳು ಸಹಜವಾಗಿಯೇ ನಿರಾಸೆಗೆ ಒಳಗಾಗಿದ್ದರು.
ಹೊಸ ವರ್ಷದಲ್ಲಿ (2021) ಹೊಸ ಪಕ್ಷ ಸ್ಥಾಪಿಸಿ ರಾಜಕೀಯ ಇನಿಂಗ್ಸ್ ಆರಂಭಿಸುವುದಾಗಿ ಹೇಳಿದ್ದ ರಜಿನಿ, ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.