ಚಾಮರಾಜನಗರ: ನಗರದ ಯಡಬೆಟ್ಟ ಬಳಿ ಇರುವ ಸರ್ಕಾರಿ ವೈದ್ಯಕೀಯ ಕಾಲೇಜು ವಸತಿ ನಿಲಯದಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ, ಸೋಮವಾರ ತಡರಾತ್ರಿ ಮತ್ತೆ ಪ್ರತ್ಯಕ್ಷವಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ವಸತಿ ನಿಲಯದಲ್ಲಿ ರಾತ್ರಿ ಚಿರತೆ ಕಾಣಿಸಿಕೊಂಡಿರುವುದು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ.
ಕೆಲ ದಿನಗಳ ಹಿಂದೆ ವಸತಿ ನಿಲಯದ ಕಾರಿಡಾರಿನಲ್ಲಿ ಚಿರತೆ ಓಡಾಡಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಈಗ ಮತ್ತೆ ಸೋಮವಾರ ತಡರಾತ್ರಿ ಕಾಲೇಜು ಕ್ಯಾಂಪಸ್ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರಲ್ಲೂ ಭಯವನ್ನುಂಟುಮಾಡಿದೆ.
ವಸತಿ ನಿಲಯಕ್ಕೆ ಕಿಟಕಿಯ ಮೂಲಕ ಒಳ ನುಗ್ಗಲು ಚಿರತೆ ಪ್ರಯತ್ನಿಸಿದ್ದು, ವಿದ್ಯಾರ್ಥಿಯಗಳು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ. ಚಿರತೆಗೆ ಕಾಡಿನಲ್ಲಿ ಸರಿಯಾಗಿ ಆಹಾರ ಸಿಗದಿರುವುದರಿಂದ ಹುಡುಕಿಕೊಂಡು ಇತ್ತ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೂಡಲೇ ಅದನ್ನು ಸೆರೆ ಹಿಡಿಯುವಂತೆ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಒತ್ತಾಯಿಸಿದ್ದಾರೆ.