ವಿಜಯಪಥ ಸಮಗ್ರ ಸುದ್ದಿ
ಮೈಸೂರು: ನನ್ನಿಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವಮಾನ, ನೋವು ಆಯಿತು. ನಾನ್ ಅಲ್ಲದೆ ಬೇರೆ ಯಾರಾದರೂ ಮೇಯರ್ ಅಭ್ಯರ್ಥಿಯಾಗಿದ್ದಾರೆ ಬಿಜೆಪಿ ಗೆಲ್ಲುತ್ತಿತ್ತೋ ಏನೋ. ಬೇಜಾರಾಗುತ್ತಿದೆ. ಈ ಸೋಲಿನ ಮುಖ ಇಟ್ಟುಕೊಂಡು ಮದುವೆಗೆ ಹೇಗೆ ಹೋಗಲಿ. ಹಾಗಾಗಿ ಹೋಗಲಾಗಲಿಲ್ಲ. ಯಡಿಯೂರಪ್ಪನವರ ಮುಂದೆ ಕಣ್ಣೀರು ಹಾಕಲು ಇಷ್ಟ ಇರಲಿಲ್ಲ. ಅದಕ್ಕಾಗಿ ಇಂದಿನ ಮದುವೆ ಸಮಾರಂಭಕ್ಕೆ ನಾನು ಹೋಗಲಿಲ್ಲ ಎಂದು ಪರಾಜಿತ ಅಭ್ಯರ್ಥಿ ಸುನಂದ ಪಾಲನೇತ್ರ ನೋವು ತೋಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ನಡೆದ ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ನನಗೆ ಕೆಲಸ ಮಾಡಲು ಆಗುತ್ತಿಲ್ಲ ಹಾಗಾಗಿ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ನನಗೆ ಟಿಕೆಟ್ ಕೊಟ್ಟವರೇ ಬಿಎಸ್‌ವೈ, ಅದಕ್ಕಾಗಿ ಅವರಿಗೆ ಹಾಗೂ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ನಾನೇ ಬಿಜೆಪಿ ಕಚೇರಿಗೆ ಹೋಗಿ ಮಾತನಾಡುತ್ತೇನೆ ಎಂದು ಹೇಳಿದರು.
ಇದು ರಾಜಕೀಯ ದೊಂಬರಾಟ ಅಂತ ಗೊತ್ತಿತ್ತು ಕಣ್ಣೀರು ತುಂಬಿಕೊಂಡು ಪಾಲಿಕೆ ಪ್ರವೇಶಿಸಿದೆ. ನನಗಾಗಿ ಬಿಜೆಪಿ ನಾಯಕರು, ಸಚಿವರು, ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡಿದರು, ನನ್ನ ಪರವಾಗಿ ಎಲ್ಲರ ಬಳಿ ಕೈಮುಗಿದು ಸಿಎಂ ನನ್ನ ಮನೆಗೆ ಬಂದಾಗಲೂ ನಾನು ಅವರಿಗೆ ಗೆಲ್ಲುವ ಭರವಸೆ ಕೊಟ್ಟಿದ್ದೆ ಎಂದು ದುಃಖಿತರಾದರು.
ಎಷ್ಟೋ ಸಲ ಸೋತಿದ್ದೇನೆ. ಆದರೆ ಈ ಸೋಲು ನನ್ನ ಸೋಲಲ್ಲ. ಇದೊಂದು ರಾಜಕೀಯ ಪಿತೂರಿ, ದೊಂಬರಾಟ. ಇದು ನನಗೆ ತುಂಬಾ ನೋವು ಕೊಟ್ಟಿದೆ. ಎಲ್ಲಾ ಪಕ್ಷದವರು ಭಾಗಿಯಾಗಿದ್ದರು. ನಾನು ಯಡಿಯೂರಪ್ಪನವರ ಸಂಬಂಧಿ ಎನ್ನುವ ಒಂದೇ ಕಾರಣಕ್ಕೆ ಈ ಸ್ಥಾನ ತಪ್ಪಲು ಕಾರಣವಾಗಿರಬಹುದು. ಆದರೆ ನಾನು 25 ವರ್ಷ ಸೇವೆ ಮಾಡಿದ್ದೇನೆ. ಅದನ್ನು ಯಾರೂ ಪರಿಗಣಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಯಡಿಯೂರಪ್ಪ, ಹೈಕಮಾಂಡ್ ಎಲ್ಲರೂ ಭಾಗಿಯಾಗಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ನನಗೆ ನೋವಾಗಿದೆ. ರಾಜಕೀಯ ಕೆಟ್ಟದ್ದಲ್ಲ. ಆದರೆ ನನ್ನಿಂದ ಕೆಟ್ಟದಾಗಿ ಹೋಯಿತು. ಸಮಾಜಸೇವೆ ಮಾಡಿಕೊಂಡು ಬಂದ ನನ್ನ ಸೇವೆಗೆ ಬೆಲೆಯಿಲ್ಲ. ನನ್ನ ಜೊತೆ ಇದ್ದವರು ಎಂಎಲ್ಎ, ಮಿನಿಸ್ಟರ್ ಆಗಿದ್ದಾರೆ. ರಾಜಕೀಯದಲ್ಲಿ ಹೀಗೆ ಆಗಬಾರದು. ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಆ ಫಲಿತಾಂಶ ಸ್ವೀಕರಿಸಲು ಸಿದ್ದವಾಗಿ ಎಂದು ಕೆಆರ್ ನಗರದಿಂದ ಮಾಹಿತಿ ಬರುತ್ತಿತ್ತು. ಆದರೆ ಯಾರಿಗೂ ಹೇಳೋಕೆ ಆಗಲಿಲ್ಲ. ನಿನಗೆ ಕಷ್ಟ ಆಗುತ್ತೆ ಎಚ್ಚರಿಕೆಯಿಂದ ಇರು ಅಂತ ಸಂಬಂಧಿಕರು ಕೆ.ಆರ್. ನಗರದಿಂದ ಕಾಲ್ ಮಾಡಿದ್ದರು ಎಂದು ಹೇಳಿದರು.
ಕಳ್ಳ ಕದ್ದು ಓಡಿ ಹೋದರೆ ಹಿಡಿಯಬಹುದು. ಈ ರೀತಿ ಮೋಸ ಮಾಡಿದರೆ ಹೇಗೆ ನಂಬೋದು. ಈ ಚುನಾವಣೆ ಯಡಿಯೂರಪ್ಪನವರ ಪ್ರತಿಷ್ಠೆಯಾಗಿತ್ತು. ವಾರ್ಡ್ನಲ್ಲಿ ಸೋತಿದ್ದರೆ ನನಗೆ ಈರೀತಿಯ ಆಗುತ್ತಿರಲಿಲ್ಲ. ಆದರೆ ಅವರಿಗೆ ನನ್ನಿಂದ ನೋವಾಗಿದೆ. ಹೀಗಾಗಿ ತಪ್ಪಾಗಿದ್ದರೆ ಕ್ಷಮಿಸಿ. ಆದರೆ ನಾನು ತಪ್ಪು ಮಾಡಿಲ್ಲ ಎಂದು ಹೇಳಿದರು.