ವಿಜಯಪಥ ಸಮಗ್ರ ಸುದ್ದಿ
ಚನ್ನಪಟ್ಟಣ: ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಹೋದರೂ ಜನರನ್ನು ಮನೆಗೆ ಸೇರಿಸುತ್ತಿರಲಿಲ್ಲ. ಆದರೆ ಅವನು ಅಧಿಕಾರ ಕಳೆದುಕೊಂಡಾಗ ಬೆಳಗ್ಗೆ 6 ಗಂಟೆಗೆ ಚನ್ನಪಟ್ಟಣಕ್ಕೆ ಬರ್ತಿದ್ದಾನೆ. ಅವನಿಗೆ ಈಗ ಗೊತ್ತಾಗಿದೆ ಜನರೆದುರು ದುರಂಕಾರ ನಡೆಯುವುದಿಲ್ಲ ಅನ್ನೋದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಸಿ.ಪಿ. ಯೋಗೇಶ್ವರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿ, ಅಭಿವೃದ್ಧಿ ಮಾಡಿದರೆ ಜನ ಮತ ಹಾಕುತ್ತಾರೆ ಎಂದು ಈಗ ಅವನಿಗೆ ಗೊತ್ತಾಗಿದೆ. ಇನ್ನು ಅವನು ಬಂದಾಗ ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಲ್ಲುಗಿಂಜುತ್ತಾರೆ. ಅವನಿಗೆ ಹೂವಿನ ಹಾರ ಹಿಡ್ಕೊಂಡು ಹೋಗುತ್ತಾರೆ. ಆದರೆ ಅವನು ಸಿಎಂ ಆಗಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ವಿಧಾನಸೌಧ ಚನ್ನಪಟ್ಟಣದಿಂದ 60ಕಿಮಿ ಇದೆ. ಆದರೆ ಯಾರು ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ. ಜೆಡಿಎಸ್ ನವರು… ಮುಂದಿನ ಏಪ್ರಿಲ್ ನಂತರ ನನ್ನ ರಾಜಕೀಯ ಪ್ರಾರಂಭವಾಗಲಿದೆ. ಇಲ್ಲಿ ನಾನು ಶಾಸಕ ಬೇರೆಯವರು ಯಾಕೆ ಬರ್ತಾರೆ ಎಂದು ಕುಮಾರಸ್ವಾಮಿ ಕೇಳುತ್ತಾರೆ.
ಮುಂದಿನ ಏಪ್ರಿಲ್ ನಂತರ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಪ್ರತಿ ಹಳ್ಳಿಗೂ ಭೇಟಿ ಕೊಡ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ. ಚನ್ನಪಟ್ಟಣ ನನ್ನ ತವರೂರು ನನಗೆ ರಾಜಕೀಯ ಜನ್ಮ ನೀಡಿದ ತಾಲೂಕು. ನನಗೆ ನೀವು ಬಿಡುವು ಮಾಡಿಕೊಟ್ಟಿದ್ದೀರಿ. ಚನ್ನಪಟ್ಟಣದಿಂದ ರಾಜ್ಯ ಪ್ರವಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಸರ್ಕಾರ ನನಗೆ ವಿಧಾನಸೌಧದಲ್ಲಿ ಕಚೇರಿ, ಬೆಂಗ್ಳೂರಿನಲ್ಲಿ ಬಂಗಲೆ ಕೊಟ್ಟಿದೆ. ನನಗೆ ಮತ ಹಾಕದಿದ್ದರೂ ಸಚಿವನಾಗುವ ಶಕ್ತಿ ಕೊಟ್ಟಿದ್ದೀರಿ ಎಂದು ಕ್ಷೇತ್ರ ಜನರನ್ನು ವ್ಯಂಗ್ಯಭರಿತವಾಗಿಯೇ ಓಲೈಸಿಕೊಳ್ಳುವ ಮಾತುಗಳನ್ನು ಆಡಿದರು.