ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿರುವ ನಡುವೆಯೇ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ವಿಚಾರದಲ್ಲಿ ಯಾವುದೇ ವಿಶೇಷತೆ ಇಲ್ಲ. ಇದು ಹಳೆಯ ಕಥೆ ಎಂದು ಹೇಳಿದ್ದಾರೆ.
ಮಹಾಶಿವರಾತ್ರಿ ಅಂಗವಾಗಿ ಇಂದು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲು ತೆರಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಒಂದು ವರ್ಷದಿಂದ ನಡೆಯುತ್ತಿರುವ ಬೆಳವಣಿಗೆ ಹೀಗಾಗಿ ಇದಕ್ಕೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂಸ ಅವರು, ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಜೆಡಿಎಸ್ ಹುಟ್ಟಿದಾಗಿನಿಂದ ಇದೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೇವೇಗೌಡ ಅವರು ಯಾರನ್ನು ನಂಬಿರುತ್ತಾರೆ ಅವರೇ ಕುತ್ತಿಗೆ ಕುಯ್ಯುತ್ತಾರೆ. ಯಾರು ಹೊರಗೆ ಹೋಗ್ತಾರೋ ಅವರಿಗೆ ಬಾಗಿಲು ತೆರೆದಿದೆ. ಅವರು ಎಲ್ಲಿಗೆ ಹೋಗಬೇಕು ಅಂದುಕೊಂಡಿದ್ದಾರೋ ಹೋಗಬಹುದು. ಪಕ್ಷದಿಂದ ಎಲ್ಲಾ ಪಡೆದು ನಂತರ ಹೊರಗೆ ಹೋಗುವಾಗ ಏನಾದರೂ ಕೇಳುತ್ತಾರಾ ಎಂದು ಅಸಮಾಧಾನದಿಂದಲ್ಲೇ ಪ್ರಶ್ನಿಸಿದರು.
ಈವರೆಗೆ ಜೆಡಿಎಸ್ ಪಕ್ಷದಿಂದ ಎಷ್ಟು ಜನ ಹೊರಹೋಗಿದ್ದಾರೆ ಅದರಿಂದ ಪಕ್ಷವೇನೂ ಮುಳುಗಿಲ್ಲವಲ್ಲ, ಜೀವಂತವಾಗಿದೆ. ಹೀಗಾಗಿ ಇಷ್ಟ ಇಲ್ಲದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರನ್ನು ಪಕ್ಷದಿಂದ ದೂರವಿಡುತ್ತೇವೆ. ತಾತ್ಕಾಲಿಕವಾಗಿ ಕೈಗೊಂಡ ನಿರ್ಧಾರದಿಂದ ಈ ಸಮಸ್ಯೆ ಉಂಟಾಗಿರುವುದು. ಇಂಥವರ ವಿರುದ್ಧ ಕ್ರಮ ಕೈಗೊಂಡರೆ ಅವರಿಗೆ ಸುಲಭವಾಗುತ್ತದೆ. ಚಾಕು ಹಾಕಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದು ಪಕ್ಷತೊರೆಯುವವರಿಗೆ ಎಚ್ಡಿಕೆ ನೋವಿನಿಂದಲೇ ತಿರುಗೇಟು ನೀಡಿದರು.