ವಿಜಯಪಥ ಸಮಗ್ರ ಸುದ್ದಿ
ತಿ. ನರಸೀಪುರ: ಇತಿಹಾಸ ಪ್ರಸಿದ್ಧ ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ತಾಲೂಕಿನಲ್ಲಿ ದಲಿತರ ನ್ಯಾಯಯುತ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂಬ ನೋವು ದಲಿತ ಸಮುದಾಯವನ್ನು ಬಾಧಿಸುತ್ತಿದೆ.
ಇನ್ನೂ ಕೂಡ ದಲಿತರನ್ನು ಕೀಳು ಭಾವನೆಯಿಂದ ಕಾಣುವ ಮತ್ತು ನಡೆಸಿಕೊಳ್ಳುವ ಜನರಿಂದ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದೆ. ಅದರಲ್ಲೂ ನಿನ್ನೆ (ಮಾ.10) ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಗ್ರಾಮವೊಂದರಲ್ಲಿ ಇದ್ದ ಸ್ಮಶಾನಕ್ಕೆ ಹೋಗುವ ರಸ್ತೆ ಒತ್ತುವರಿಯಾಗಿರುವುದರಿಂದ ಕೆಸರು ಗದ್ದೆಯೊಳಗೆ ದಲಿತರು ಶವ ಹೊತ್ತೊಯ್ಯುವ ದುಸ್ಥಿತಿ ನಿರ್ಮಾಣವಾಯಿತು. ಇದು ಕಳೆದ ಹಲವಾರು ವರ್ಷಗಳಿಂದಲೂ ಇದೆ ಪರಿಸ್ಥಿತಿ ಇದೆ.
ಅದು ತಾಲೂಕಿನ ಮರಡೀಪುರ ಗ್ರಾಮದಲ್ಲಿ ಈ ದಯಾನೀಯ ಸ್ಥಿತಿ ಇದೆ. ಗ್ರಾಮದಲ್ಲಿ ಗುರುವಾರ ನಿಧನರಾಗಿದ್ದ ರವಿ ಎಂಬ ದಲಿತನ ಅತ್ಯಕ್ರಿಯೆ ನೆರವೇರಿಸಲು ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದೆ ಕೆಸರುಗದ್ದೆಯಲ್ಲಿ ಶವ ಹೊತ್ತೊಯ್ದು ಪರದಾಟ ಅನುಭವಿಸಿದ್ದಾರೆ.
ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ದೂರು ನೀಡಿದರೂ ಯಾವ ಅಧಿಕಾರಿಯೂ ಇತ್ತ ಗಮನ ಕೊಡುತ್ತಿಲ್ಲ ಎಂಬುವುದು ಗ್ರಾಮದ ದಲಿತರ ಅಳಲಾಗಿದೆ. ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಶಾಸಕರು ಇದ್ದರೂ ದಲಿತರಿಗೆ ಮೂಲಭೂತ ಹಕ್ಕು ಇನ್ನೂ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಅಶ್ವಿನ್ ಕುಮಾರ್ ಹೇಳಿದ್ದೇನು
ಈವರೆಗೂ ಮರಡೀಪುರ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ ಎಂದು ಅಲ್ಲಿನ ಯಾವುದೇ ಒಬ್ಬ ವ್ಯಕ್ತಿಯು ನನ್ನ ಗಮನಕ್ಕೆ ತಂದಿಲ್ಲ. ಹೀಗಾಗಿ ನಮಗೂ ಆ ವಿಷಯ ತಿಳಿದಿರಲಿಲ್ಲ. ಈಗ ವಿಷಯ ತಿಳಿದ ಕೂಡಲೇ ನಾನು ತಹಸೀಲ್ದಾರ್ ಅವರೊಂದಿಗೆ ಮಾತನಾಡಿದ್ದು, ಸ್ಮಶಾನಕ್ಕೆ ಹೋಗಲು ಇರುವ ದಾರಿ ಸಂಬಂಧ ಸ್ಕೆಚ್ ರೆಡಿ ಮಾಡಿಕೊಂಡು ಆ ಬಗ್ಗೆ ಪೂರ್ಣ ಮಾಹಿತಿ ಕಲೆಹಾಕಿ. ರಸ್ತೆ ಮಾಡಿಕೊಡುವ ಬಗ್ಗೆ ಸೂಚನೆ ನೀಡಿರುವುದಾಗಿ ಶಾಸಕ ಅಶ್ವಿನ್ ಕುಮಾರ್ ವಿಜಯಪಥ ಕ್ಕೆ ತಿಳಿಸಿದರು.
ಇನ್ನು ಗ್ರಾಮಸ್ಥರು ಇಂತಹ ಸಮಸ್ಯೆಗಳು ಇದ್ದಾಗ ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ನನ್ನ ಫೋನ್ ಮೂಲಕವೋ ಅಥವಾ ನೇರವಾಗಿಯಾದರೂ ಸರಿ ಭೇಟಿ ಮಾಡಿದರೆ ನಾವು ಕಾನೂನಿನಡಿ ಅನುಕೂಲ ಮಾಡಿಕೊಡಬಹುದು. ಆದ್ದರಿಂದ ಯಾರೇ ಆದರೂ ಇಂಥ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಕ್ಷೇತ್ರದ ಶಾಸಕರಾಗಿ ನಿಮ್ಮ ನೋವಿಗೆ ಸ್ಪಂದಿಸಲು ಸದಾ ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಮರಡೀಪುರ ಗ್ರಾಮದಲ್ಲಿ ಸ್ಮಶಾನವಿದೆ ಆದರೆ ಹೋಗಲು ರಸ್ತೆ ಇಲ್ಲ. ಈ ಬಗ್ಗೆ ತಹಸೀಲ್ದಾರರೊಂದಿಗೆ ಮಾತನಾಡಿದ್ದು, ಆದಷ್ಟು ಶೀಘ್ರದಲ್ಲೇ ಈ ಸಮಸ್ಯೆ ಪರಿಹರಿಸಲಾಗುವುದು. ಇನ್ನು ಗ್ರಾಮಸ್ಥರು ಶಾಸಕರಿಗೆ ಹೇಳಿದ್ದೇವೆ ಇನ್ನು ಅದನ್ನು ಅವರೆ ನೋಡಿಕೊಳ್ಳುತ್ತಾರೆ ಎಂದು ಸುಮ್ಮನೇ ಕೂರದೆ ಆ ಕೆಲಸ ಎಲ್ಲಿವರೆಗೆ ಬಂದಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ತಿಳಿದುಕೊಳ್ಳುತ್ತಿರಬೇಕು ಎಂದು ಅಶ್ವಿನ್ ಕುಮಾರ್ ತಿಳಿಸಿದ್ದಾರೆ.