ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿರುವ ಶಾಸಕ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ರಾಸಲೀಲೆ ಸಿಡಿ ವಿಚಾರದಲ್ಲಿ ಆರೋಗ್ಯ ಸಚಿವ ಸುಧಾಕರ್ ಆಡಿದ ಅನಾರೋಗ್ಯಕರ ಮಾತುಗಳಿಂದಾಗಿ ಯಡಿಯೂರಪ್ಪ ಸರ್ಕಾರ ತೀವ್ರ ಮುಜುಗರಕ್ಕೆ ಸಿಲುಕಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಎಲ್ಲ 224 ಶಾಸಕರ ಸಾಚಾತನವನ್ನು ಪ್ರಶ್ನಿಸಿ ಸುಧಾಕರ್ ನೀಡಿದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಸುಧಾಕರ್ ಅವರ ಅತಿರೇಕದ ಹೇಳಿಕೆಗೆ ಪ್ರತಿಪಕ್ಷ ಮಾತ್ರವಲ್ಲ ಖುದ್ದು ಬಿಜೆಪಿ ಶಾಸಕರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಸಚಿವ ಸುಧಾಕರ್ ಇತರ ನಾಯಕರ ಹೆಸರು ತಂದು ಮಾತನಾಡಿರುವುದಕ್ಕೆ ಬಿಜೆಪಿ ನಾಯಕರೇ ಕೆಂಡ ಕಾರಿದ್ದಾರೆ.
ಇನ್ನು ಸುಧಾಕರ್ ಅವರ ಹೇಳಿಕೆಯಿಂದ ಸರ್ಕಾರ ಸಹ ಹಿಂದೆ ಸರಿದಿದೆ. ಸಚಿವರಾಗಿ ಅಲ್ಲದೇ ವೈಯಕ್ತಿಕ ಸಾಮರ್ಥ್ಯದಲ್ಲಿ ಈ ಹೇಳಿಕೆ ನೀಡಿದ್ದಾರೆಯೇ ಹೊರತು ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುಧಾಕರ್ ಅವರ ಈ ದುಡುಕಿನ ಹೇಳಿಕೆಯಿಂದಾಗಿ ವಿಪಕ್ಷಗಳಿಗೆಸರ್ಕಾರದ ಮೇಲೆ ಎರಗಲು ಅಸ್ತ್ರ ನೀಡಿದಂತಾಗಿದೆ ಎಂದು ಹಲವು ಬಿಜೆಪಿ ಶಾಸಕರು ಸುದ್ದಿಗಾರರೊಂದಿಗೆ ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ, ಎಚ್‌ಡಿಕೆ, ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರೇ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ?. ಇವರು ಮಾತ್ರವಲ್ಲ 224 ಶಾಸಕರ ವಿರುದ್ಧವೂ ನೈತಿಕತೆ ವಿಚಾರವಾಗಿ ತನಿಖೆ ನಡೆಯಲಿ ಎಂದು ಸುಧಾಕರ್ ಸವಾಲು ಹಾಕಿದ್ದರು.
ಇದಕ್ಕೆ ಬಿಜೆಪಿ ಶಾಸಕ ರೇಣುಕಾಚಾರ್ಯ ಕೂಡ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸುಧಾಕರ್ ವಿರುದ್ಧ ಕಿಡಿಕಾರಿದರು. ಈ ರೀತಿಯ ಹೇಳಿಕೆ ಕೊಡುವ ಮುನ್ನ ಸ್ವಲ್ಪ ಯೋಚನೆ ಮಾಡಬೇಕು. ಇಂಥ ಹೇಳಿಕೆಯಿಂದ ರಾಜ್ಯದ ಜನರಿಗೆ ಯಾವ ರೀತಿಯ ಸಂದೇಶ ಹೋಗುತ್ತದೆ ಎಂದು ಮೊದಲು ತಿಳಿದುಕೊಂಡು ಮಾತನಾಡಬೇಕು ಎಂದು ಹೇಳಿದ್ದರು.
ಅಷ್ಟೇ ಅಲ್ಲದೇ ಇವರು ಎಲ್ಲ 224 ಶಾಸಕರು ಮತ್ತು ನಾಡಿನ ಜನರ ಮುಂದೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಹೇಳಿದ್ದರು.
ಇಲ್ಲಿ ಯಾರು ಹರಿಶ್ಚಂದ್ರರಲ್ಲ, ಸುಖಸುಮ್ಮನೆ ಏಕೆ ರಾಡಿ ಎರಚಿಕೊಳ್ಳುತ್ತೀರಿ. ನೀವು ಸತ್ಯವಂತರಾದರೇ ಕೋರ್ಟ್ ಗೆ ಹೋಗಿ ಏಕೆ ತಡೆಯಾಜ್ಞೆ ತಂದಿರಿ ಎಂದು ಮಾತಿನಲ್ಲೇ ಚಾಟಿ ಬೀಸಿದ ಅವರು, ಈ ಮಾತು ಇರಲಿ ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ನನ್ನ ಹೆಸರನ್ನು ಏಕೆ ಈಗ ಎಳೆದು ತರುತ್ತೀರಿ ಎಂದು ಮಾಜಿ ಸಿಎಂ ಎಚ್‌ಡಿಕೆ ಖಾರವಾಗಿ ಪ್ರಶ್ನಿಸಿದ್ದರು.