ವಿಜಯಪಥ ಸಮಗ್ರ ಸುದ್ದಿ
ಬಾಗಲಕೋಟೆ: ನಗರದ ಮಾರವಾಡಿ ಗಲ್ಲಿಯಲ್ಲಿ ಒಂದೇ ಕುಟುಂಬದ 13 ಜನರಿಗೆ ಕೊರೊನಾ ಸೋಂಕು ದೃಡಪಟ್ಟ ಹಿನ್ನಲೆಯಲ್ಲಿ ಸೋಂಕು ದೃಡಪಟ್ಟವರ ಮನೆಯ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಝೋನ್ ನಿರ್ಮಿಸಲಾಗಿದ್ದು, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮತ್ತು ಜಿ.ಪಂ ಸಿಇಓ ಟಿ.ಭೂಬಾಲನ್ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋವಿಡ್ 2ನೇ ಅಲೇ ಭೀತಿ ಉಂಟಾಗಿದ್ದು, ಒಂದೇ ಕುಟುಂಬದ 13 ಜನರಿಗೆ ಸೋಂಕು ತಗಲಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸೋಂಕಿತ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗಿದ್ದು, ಸೊಂಕು ತಗಲಿದ ಮನೆಯ 3 ಜನ ಸದಸ್ಯರು ಹಾಗೂ ಡ್ರೈವರ್ ಸೇರಿ ಸಾಂಗಲಿಗೆ ಹೋಗಿ ಮಾರ್ಚ 14 ರಂದು ಬಾಗಲಕೋಟೆಗೆ ಬಂದಿದ್ದಾರೆ. ಅವರ ಸಂಪರ್ಕದಿಂದ ಮನೆಯವರಿಗೆಲ್ಲ ಸೊಂಕು ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸೊಂಕು ದೃಡಪಟ್ಟ ಮನೆಯ ಸುತ್ತಲಿನ ಕಂಟೈನ್‍ಮೆಂಟ್ ಝೋನ ವ್ಯಾಪ್ತಿಯಲ್ಲಿ 12 ಮನೆಗಳಿದ್ದು, ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಸೋಂಕು ದೃಡಪಟ್ಟ 13 ಜನರು ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ರೀತಿಯ ತೊಂದರೆ ಇರುವದಿಲ್ಲ. ಸೊಂಕು ದೃಡಪಟ್ಟವರ ಪೈಕಿ ಓರ್ವ ವೃದ್ಧ ಮಹಿಳೆ ಜಿಲ್ಲಾ ಆಸ್ಪತ್ರೆ, ಮತ್ತೊರ್ವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಉಳಿದವರು ಹೋಮ್ ಐಸೋಲೇಷನ್‍ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದರು. ಭೇಟಿ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮುನಿಷಾಮಪ್ಪ ಇದ್ದರು.
ಮೂವರು ಗುಣಮುಖ, 20 ಹೊಸ ಪ್ರಕರಣಗಳು ದೃಢ
ಜಿಲ್ಲೆಯಲ್ಲಿ ಮೂವರು ಕೋವಿಡ್‍ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ 20 ಕೊರೊನಾ ಪ್ರಕರಣಗಳು ಬುಧವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 13860 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 13669 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಹೊಸದಾಗಿ ದೃಡಪಟ್ಟವರಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 17, ಹುನಗುಂದದಲ್ಲಿ 2 ಹಾಗೂ ಮುಧೋಳದಲ್ಲಿ 1 ಪ್ರಕರಣ ದೃಡಪಟ್ಟಿವೆ. ಅದರಲ್ಲಿ ಮೂರು ಜನ ಜಿಲ್ಲಾ ಆಸ್ಪತ್ರೆಯಲ್ಲಿ, ಓರ್ವ ಪಾಟೀಲ ಮೆಡಿಕೇರ್ ಆಸ್ಪತ್ರೆಯಲ್ಲಿ ಹಾಗೂ ಉಳಿದ 16 ಜನ ಹೋಮ್ ಐಸೋಲೇಶನ್‍ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ಕೋವಿಡ್ ಲ್ಯಾಬ್‍ನಲ್ಲಿ ಪರಿಕ್ಷಿಸಲಾಗುತ್ತಿದ್ದ 1893 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 426628 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 410311 ನೆಗಟಿವ್ ಪ್ರಕರಣ 136 ಮೃತ ಪ್ರಕರಣ ವರದಿಯಾಗಿರುತ್ತದೆ. ಇನ್ನು 55 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿವರೆಗೆ ಒಟ್ಟು 462 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.