ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿಯೂ ಕಪ್ಪು ಶಿಲೀಂಧ್ರ ಸೋಂಕಿತ ರೋಗಿಗಳ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಲಿ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂಬಂಧಿತ ಮ್ಯೂಕೋರ್ಮೈಕೋಸಿಸ್ (ಸಿಎಎಂ) ಅಥವಾ ಕಪ್ಪು ಶಿಲೀಂಧ್ರ ವನ್ನು ರಾಷ್ಟ್ರೀಯ ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗಿದೆ. ಇದು ಕೋವಿಡ್ ರೋಗಕ್ಕೆ ಸಂಬಂಧಿಸಿದ ಕಾರಣ ಇದಕ್ಕೆ ನೀಡುವ ಚಿಕಿತ್ಸೆಯನ್ನು ಕೋವಿಡ್ ಚಿಕಿತ್ಸೆಯ ಭಾಗವಾಗಿ ಪರಿಗಣಿಸಬೇಕು. ಈ ಸೋಂಕು ಬಾಧಿತರ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದರು.
ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲು 4-5 ಲಕ್ಷ ರೂಪಾಯಿ ವ್ಯಯಿಸಬೇಕು. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗಗಳ ಜನತೆಗೆ ಈ ವೆಚ್ಚವನ್ನು ನಿಭಾಯಿಸಲು ಸಾಧ್ಯವೇ ಇಲ್ಲ.
ಕಪ್ಪು ಶಿಲೀಂಧ್ರವು ಮಾರಣಾಂತಿಕ ಮತ್ತು ಭಯಂಕರವಾಗಿದೆ. ಕಳಪೆ ಚಿಕಿತ್ಸೆಯ ಕಾರಣದಿಂದಾಗಿ ಇದು ಕೋವಿಡ್ ರೋಗಿಗಳಲ್ಲಿ ಅಡ್ಡಪರಿಣಾಮವನ್ನು ಉಂಟು ಮಾಡುತ್ತದೆ. ಕಪ್ಪು ಫಂಗಸ್ ಸೋಂಕಿನ ಚಿಕಿತ್ಸೆಯನ್ನು ಕೋವಿಡ್ ಯೋಜನೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, SAST ನ ಭಾಗವಾಗಿಸಬೇಕು. ಕಪ್ಪು ಫಂಗಸ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕರ್ನಾಟಕದ ಸಾರ್ವಜನಿಕ ಆಸ್ಪತ್ರೆಗಳು ಅನೇಕ ಕೊರತೆಗಳನ್ನು ಅನುಭವಿಸುತ್ತಿದೆ. ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನೀಡಬಲ್ಲ ನುರಿತ ತಜ್ಞ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಇದ್ದಾರೆ. ಈ ಸೋಂಕಿನ ಬಗ್ಗೆ ತಿಳಿದಿರುವ ವೈದ್ಯರನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೇಮಕ ಮಾಡಬೇಕು. ಆಸ್ಪತ್ರೆಗಳಲ್ಲಿ ಇರುವ ಎಲ್ಲಾ ಸಮಸ್ಯೆಗಳನ್ನೂ ಸರಕಾರ ನಿವಾರಿಸಬೇಕು ಎಂದು ಪೃಥ್ವಿ ರೆಡ್ಡಿ ಒತ್ತಾಯಿಸಿದರು.