Breaking NewsNEWSನಮ್ಮರಾಜ್ಯ

ಅಮಾನವೀಯ ಘಟನೆ: ಮಾಡದ ತಪ್ಪು ಒಪ್ಪಿಕೊಳ್ಳಲು ಬಲವಂತ ಮಾಡಿ ದಲಿತ ಯುವಕನಿಗೆ ಮೂತ್ರ ಕುಡಿಸಿದ ಎಸ್‌ಐ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಚಿಕ್ಕಮಗಳೂರು: ಪುನೀತ್ ಎಂಬ ಇಪ್ಪತ್ತೆರಡು ವಯಸ್ಸಿನ ದಲಿತ ಯುವಕನಿಗೆ ಮೂತ್ರ ಕುಡಿಸಿ ಕೊನೆಗೆ ನೆಲಕ್ಕೆ ಸುರಿದಿದ್ದ ಮೂತ್ರವನ್ನು ನಾಲಗೆಯಿಂದ ನೆಕ್ಕಿಸುವ ಮೂಲಕ ಗೋಣಿಬೀಡು ಪಿಎಸ್ಐ ತನ್ನ ವಿಕೃತಿ ಮರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇಂತಹುದೊಂದು ಅಮಾನವೀಯ ಕೃತ್ಯ ನಡೆದರೂ ಪಿಎಸ್ಐ ಅರ್ಜುನ್‌ಗೆ ಈವರೆಗೂ  ಯಾವ ಶಿಕ್ಷೆಯೂ ಆಗಿಲ್ಲ. ಜನರ ಕೋಪ, ಆಕ್ರೋಶ ಶಮನಗೊಳಿಸಲು ಆತನನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿಕೊಂಡಿರುವ ಇಲಾಖೆ ಮುಖ್ಯಸ್ಥರು ಕೇವಲ ಕಣ್ಣೊರೆಸುವ ಕೆಲಸ ಮಾಡಿದ್ದಾರೆ. ಇನ್ನು ಮೂತ್ರ ಕುಡಿಸಿದ ಅತ್ಯಂತ ಅಮಾನವೀಯ ಪ್ರಕರಣ ನಡೆದರೂ ಮಾನವ ಹಕ್ಕು ಆಯೋಗ ತುಟಿ ಬಿಚ್ಚದಿರುವುದು ನಾಡಿನ ಜನಕ್ಕೆ ಅವಮಾನವೇ ಸರಿ ಎಂದು ಜನ ಆಕ್ರೋಧ ವ್ಯಕ್ತಪಡಿಸುತ್ತಿದ್ದಾರೆ.

ನಡೆದಿದ್ದೇನು?
22 ವರ್ಷದ ಪುನೀತ್ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದವನು. ಐಟಿಐ ಮಾಡಿಕೊಂಡು ಹೊರಗುತ್ತಿಗೆಯಲ್ಲಿ ಕಂಪ್ಯೂಟರ್ ಕೆಲಸ ಮಾಡಿಕೊಂಡಿದ್ದಾನೆ. ಆರು ತಿಂಗಳ ಹಿಂದೆ ಪುನೀತ್ ಇದೇ ಗ್ರಾಮದ ಕಾಣೆಯಾದ ಹೆಂಗಸಿನ ಫೋನ್‌ ನಂಬರ್‌ಗೆ ಕರೆ ಮಾಡಿದ್ದ, ಈ ವಿಚಾರ ಅವರ ಮನೆಗೂ ಗೊತ್ತಾಗಿ ಕರೆಸಿ ಮದುವೆಯಾದ ಹೆಣ್ಣುಮಕ್ಕಳಿಗೆ ಕರೆ ಮಾಡಬಾರದೆಂದು ಬುದ್ಧಿ ಹೇಳಿ ಕಳಿಸಿದ್ದರು.

ಇದೀಗ ಆಕೆ ಪಕ್ಕದ ಮನೆಯಾತನೊಂದಿಗೆ ಓಡಿ ಹೋಗಿದ್ದು, ಇದರಲ್ಲಿ ಪುನೀತನ ಕೈವಾಡ ಇರಬಹುದೆಂಬ ಶಂಕೆಯಿಂದ ಕೆಲವರು ಆತನ ಮನೆ ಮುಂದೆ ಬಂದು ಜಗಳ ಮಾಡಿದ್ದಾರೆ. ಈ ಬಗ್ಗೆ ಮಾಹಿತಿಯೇ ಇಲ್ಲದ ಪುನೀತ್ ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಎಷ್ಟೇ ಹೇಳಿದರೂ ಜನರು ಒಪ್ಪದಿದ್ದಾಗ ಹೆದರಿದ ಆತ ಪೊಲೀಸ್‌ಠಾಣೇಗೆ ಕರೆ ಮಾಡಿ ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾನೆ.

ಈ ನಡುವೆ ಈತನ ಮೇಲೆ ಯಾರೂ ದೂರು ನೀಡದಿರುವುದರಿಂದ ಈತನ ಪಾತ್ರ ಏನೂ ಇಲ್ಲ ಎಂದು ಹೇಳುತ್ತಾರೆ. ಆದರೆ, ಅಲ್ಲಿನ ಕೆಲ ಪೊಲೀಸ್‌ ಸಿಬ್ಬಂದಿ “ಸರ್ ಈತನದ್ದು ಕೈವಾಡ ಇದೆ . ಅವರು ಓಡಿ ಹೋಗಲು ಈತನೇ ಕಾರಣ ’’ಎಂದು ಪಿಎಸ್ಐಗೆ ಕಿವಿ ಚುಚ್ಚಿದ್ದಾರಂತೆ. ಅವರ ಮಾತು ನಂಬಿದ ಪಿಎಸ್ಐ ಗಾಡಿ ಹತ್ತು ಸೂ…ಮಗನೇ’ ಎಂದು ಜೀಪಿನಲ್ಲಿ ಹತ್ತಿಸಿಕೊಂಡು ಠಾಣೆಗೆ ಕರೆತಂದಿದ್ದಾರೆ.

ಬಳಿಕ ಯುವಕನಿಗೆ ನರಕ ದರ್ಶನ ತೋರಿಸಿದ ಎಸ್‌ಐ
ಯುವಕನೇ ಹೇಳಿದಂತೆ …. ನಾನು ಪೊಲೀಸ್ ವಾಹನದಿಂದ ಕೆಳಗಿಳಿದ ತಕ್ಷಣ ಠಾಣೆಯ ಮೇಲಿನ ಕೋಣೆಯೊಂದಕ್ಕೆ ಕರೆದುಕೊಂಡು ಹೋದರು. ನನ್ನ ಮೇಲೆ ದೂರಿಲ್ಲ ಎಂದು ಬೇಡಿಕೊಂಡರೂ ಕೇಳಲಿಲ್ಲ. ಬಟ್ಟೆ ಬಿಚ್ಚು ಸೂ.. ಮಗನೇ ಎಂದು ಬೈದರು. ನನ್ನ ಕೈ ಕಾಲು ಕಂಬಕ್ಕೆ ಕಟ್ಟಿ ನೇತು ಹಾಕಿದರು. ಮಧ್ಯೆ ಕಬ್ಬಿಣದ ರಾಡು ಇಟ್ಟರು. ಮುಂಗಾಲಿಗೆ, ಅಂಗಾಲಿಗೆ ಹೊಡೆದರು. ಸುಮಾರು 2 ಗಂಟೆ ಹಿಂಸೆ ಕೊಟ್ಟರು.

ಸಾರ್ ನಾನೇನಾದ್ರೂ ಇದರಲ್ಲಿ ಇದ್ದೀನಿ ಎಂದರೆ ಸತ್ತು ಹೋಗುತ್ತೇನೆ ಅವರನ್ನು ಕರೆಸಿ ಒಂದು ಮಾತು ಕೇಳಿ ಎಂದು ಅತ್ತು ಬೇಡಿಕೊಂಡೆ….ಅವರ ಮನ ಕರಗಲಿಲ್ಲ. ಬದಲಾಗಿ ನೀನೇ ಮಾಡಿರುವುದು ಎಂದು ಒಪ್ಪಿಕೋ ಎಂದು ಮತ್ತೆ ಹೊಡೆದರು ಕೊನೆಗೆ ಇವರ ಹೊಡೆತ, ಹಿಂಸೆ ಹೆಚ್ಚಾದಾಗ ಸಾಯಿಸುತ್ತಾರೆ ಎಂದು ಹೆದರಿ ಒಪ್ಪಿಕೊಂಡೆ . ಆಗ ಸ್ವಲ್ಪ ಹೊತ್ತು ಸುಮ್ಮನಾದರು. ಗಂಟಲು ಒಣಗಿ ಹೋಗಿತ್ತು. ಉಸಿರಾಡಲು ಕಷ್ಟ ಆಗುತ್ತಿತ್ತು, ಬಾಯಾರಿಕೆ ಆಗುತ್ತಿದೆ ನೀರು ಕೊಡಿ ಎಂದು ಬೇಡಿಕೊಂಡೆ. ಅಲ್ಲೇ ಇದ್ದ ಪೊಲೀಸ್​ ಖಾಲಿ ಬಾಟಲ್ ನಲ್ಲಿ ಉಳಿದಿದ್ದ ಎರಡೇ ಹನಿ ಹಾಕಿದರು. `ಚೆನ್ನಾಗಿದ್ದೀಯಾ’ ಎಂದು ಅಣಕಿಸಿ ಕೇಳಿದರು.

ನಾನು ನೇತಾಡುತ್ತಲೇ ಇದ್ದೆ. ನೀನು ಅಪ್ಪನಿಗೆ ಹುಟ್ಟಿದ್ದೀಯಾ..? ಎಂದು ಕೇಳಿದರು. ಹೌದು ಎಂದೆ. ಇದಕ್ಕೆ ಗ್ಯಾರಂಟಿ ಏನು..? ಎಂದರು… ಯಾವ ಜಾತಿ..?ಎಂದರು ಎಸ್​ಸಿ ಎಂದಿದ್ದಕ್ಕೆ ಮತ್ತೆ ಹೊಡೆದರು. ನಿಮ್ಮದು ಇದೇ ಕೆಲಸ ಸೋಳೆ ಮಕ್ಕಳ ಎಂದು ಪಾದಕ್ಕೆ ಹೊಡೆದರು. ಕೊನೆಗೆ ಬಾಯಿ ಸಂಪೂರ್ಣ ಒಣಗಿದ್ದರಿಂದ ತಡೆಯದೇ ನೀರು ಬೇಕೇ ಬೇಕು ಎಂದು ಗೊಗರೆದೆ.

ಚೇತನ ಎಂಬುವನಿಂದ ನನ್ನ ಬಾಯಿಗೆ ಉಚ್ಚೆ ಊಯಿಸಿದರು
ಬಾಯಾರಿಕೆ ತಡೆಯದೆ ಸಾಯುವಂತಾಗುತ್ತಿತ್ತು. ನೀರು ಬೇಕೇ ಬೇಕೆಂದು ಅಂಗಲಾಚಿದೆ. ನನ್ನ ಇರಿಸಿಕೊಂಡಿದ್ದ ಕೋಣೆಯಲ್ಲಿ ಕಳ್ಳತನದ ಆರೋಪದಲ್ಲಿ ಚೇತನ್ ಎಂಬುವನನ್ನು ಕರೆದು ಕೂರಿಸಿಕೊಂಡಿದ್ದರು. ಆತನನ್ನು ಕರೆದ ಎಸ್‌ಐ ಈತನಿಗೆ ನೀರು ಬೇಕೆಂತೆ ಉಚ್ಚೆ ಉಯ್ಯೋ ಎಂದರು ಆತ ಹಿಂಜರಿದ. ಆದರೆ ಆತನಿಗೆ ಭಯ ಹುಟ್ಟಿಸಿ ನಿನಗೂ ಇದೇ ರೀತಿ ಮಾಡುತ್ತೇನೆಂದು ಹೆದರಿಸಿದರು. ಆಗ ನನ್ನ ಬಳಿ ಬಂದ ಆತ ಜಿಪ್ಪು ಬಿಚ್ಚಿ ನನ್ನ ಬಾಯಿಗೆ ಮೂತ್ರ ಮಾಡಿದ. ನಾನು ತಲೆ ಎತ್ತಿ ಬೇಡ ಎಂದರೂ ಬಿಡದ ಪಿಎಸ್ಐ ಕೇಳಲಿಲ್ಲ. ನನಗೆ ಆಗಲೇ ಸಾವು ಬರಬಾರದೆ ಅನಿಸಿತು. ಹೊಡೆದ ಹೊಡೆತಕ್ಕೆ ಕೈಕಾಲುಗಳು ಸಂಪೂರ್ಣ ಬಿದ್ದು ಹೋಗಿದ್ದವು. ನಂತರ ಕೆಲವರು ಕೆಳಗೆ ಇಳಿಸಿದರು.

ನಾನು ಇಲ್ಲಿದ್ದೇನೆಂದು ಯಾರಿಗೂ ಗೊತ್ತಿರಲಿಲ್ಲ. ಅಂದು ಸಂಜೆ 5.30ಕ್ಕೆ ನನ್ನ ಮಾವ ಬಂದಿದ್ದರೂ ನನ್ನ ಭೇಟಿಯಾಗಲು ಬಿಟ್ಟಿರಲಿಲ್ಲ. ರಾತ್ರಿ 10 ಗಂಟೆಗೆ ಬರಲು ಹೇಳಿದ್ದರು. ಕೊನೆಗೆ 10.30ಕ್ಕೆ ಮಾವ ಬಂದರು. ನನ್ನ ಸ್ಥಿತಿ ನೋಡಿ ಅತ್ತರು. ಅವರೊಂದಿಗೆ ಬೈಕಲ್ಲಿ ಬರುತ್ತಾ ನಡೆದಿದ್ದೆಲ್ಲವನ್ನೂ ಹೇಳಿದೆ. ಆದರೆ ಅಪ್ಪ ಅಮ್ಮನಿಗೆ ವಿಚಾರ ಹೇಳಿರಲಿಲ್ಲ.

ಮತ್ತೆ ಕುರುಕುಳ ಶುರುವಾಯ್ತು
ಅದಾಗಿ ಮತ್ತೆ ಎಸ್‌ಐ ಅವರೇ ಕರೆ ಮಾಡಿ ನೀನೇ ಅವರನ್ನು ಎಲ್ಲಿಗೆ ಕಳಿಸಿದ್ದೀಯಾ ಕರೆದುಕೊಂಡು ಬಾ ಎಂದು ಹೆದರಿಸಿದರು. ಆಗ ಭಯ ಇನ್ನೂ ಶುರುವಾಯ್ತು. ಸಾಯಬೇಕೆನಿಸಿತು. ಕೊನೆಗೆ ಮಾವನಿಗೆ ಹೇಳಿದೆ. ನಂತರ ಗೊತ್ತಿರುವ ಪತ್ರಕರ್ತರ ಮೂಲಕ ಎಸ್ಪಿ, ಐಜಿ, ಡಿಐಜಿ , ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದೆವು. ಮಾಧ್ಯಮಗಳಲ್ಲಿ ಸುದ್ದಿ ಬಂತು. ಘಟನೆ ಬಗ್ಗೆ ನಮ್ಮ ಎಂಎಲ್‌ಎ ಎಂ.ಪಿ. ಕುಮಾರಸ್ವಾಮಿ, ಮೋಟಮ್ಮ ಮೊದಲಾದವರು ವಿಚಾರಿಸಿಕೊಂಡರು. ದಲಿತ ಸಂಘಟನೆಗಳೆಲ್ಲ ನಮ್ಮ ಪರ ಬಂದರು. ಈ ನಡುವೆ ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಸ್ಪಿಗೆ ವಹಿಸಲಾಗಿದ್ದು, ಅವರು ಬಂದು ನನ್ನ ಹೇಳಿಕೆ ತೆಗೆದುಕೊಂಡಿದ್ದಾರೆ.

ಮೂತ್ರ ಊಯ್ದ ಚೇತನ್ ಎಂಬಾತ ನಾಪತ್ತೆಯಾಗಿದ್ದಾನೆ. ಆತನಿಗೆ ಹಣ ಮತ್ತು ಬೆದರಿಕೆ ಹಾಕಿ ಎಲ್ಲೋ ಬಚ್ಚಿಡಲಾಗಿದೆ. ಆತ ಯಾರ ಕೈಗೂ ಸಿಗುತ್ತಿಲ್ಲ. ಕೆಲವು ಪೊಲೀಸರು ಹಾಗೂ ಕೆಲ ಮುಖಂಡರು ನನ್ನ ಮನೆಗೆ ಬಂದಿದ್ದರು, ಎರಡು ಲಕ್ಷ ಹಣ ಕೊಡುತ್ತೇವೆ, ಕೆಲಸ ಕೊಡಿಸುತ್ತೇವೆ ರಾಜಿ ಮಾಡಿಕೋ ಎಂದರು. ನಾನು ಒಪ್ಪಿಕೊಳ್ಳಲಿಲ್ಲ. ನನಗೆ ಎಸ್‌ಐ ಮೇಲೆ ವೈಯಕ್ತಿಕ ದ್ವೇಷ ಇಲ್ಲ. ನನಗೆ ಆದ ಅವಮಾನ ಯಾರಿಗೂ ಆಗಬಾರದು. ಆತನನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆದರೆ, ಆತನ ವಜಾ ಮಾಡಬೇಕು ನನಗೆ ನ್ಯಾಯ ಬೇಕು ಇಷ್ಟೆ ನಾನು ಕೇಳಿಕೊಳ್ಳುವುದು ಎಂದು ಪುನೀತ್ ತನಗಾದ ನೋವವನ್ನು ಎಳೆಎಳೆಯಾಘಿ ಬಿಚ್ಚಿಟ್ಟಿದ್ದಾನೆ.

ಇನ್ನು ಈ ಕೃತ್ಯ ಎಸಗಿರುವುದು ಸತ್ಯವೇ ಆಗಿದ್ದರೆ ಆರಕ್ಷಕ ಸ್ಥಾನದಲ್ಲಿ ಮುಂದುವರಿಯುವ ಯಾವ ಹಕ್ಕು ಈ ಎಸ್‌ಐಗೆ ಇಲ್ಲ. ಎಸ್‌ಐ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಶಿಕ್ಷೆಕೊಡಿಸುವ ಜತೆಗೆ ಕೆಲಸದಿಂದದಲೂ ವಜಾ ಮಾಡಬೇಕು ಎಂಬುವುದು ಸಮಸ್ತ ನಾಗರಿಕರ ಒತ್ತಾಯವಾಗಿದೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...