ವಿಜಯಪಥ ಸಮಗ್ರ ಸುದ್ದಿ
ಪಾಂಡವಪುರ (ಮಂಡ್ಯ): ಕೊರೊನಾದಿಂದ ಇಡೀ ಗ್ರಾಮ ಸೀಲ್‍ಡೌನ್ ಆಗಿದ್ದು, ರೈತರು ಸೇರಿದಂತೆ ಯಾರು ಮನೆಯಿಂದ ಹೊರಬರಲು ಆಗದ ಕಾರಣ ಬೆಳೆದ ಫಸಲು ಮಣ್ಣುಪಾಲಾಗುತ್ತಿದೆ.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಗ್ರಾಮವನ್ನು ಸೂಲ್‌ಡೌನ್ ಮಾಡಲಾಗಿದೆ. ಹೀಗಾಗಿ ಯಾರು ಮನೆಯಿಂದ ಹೊರಬರದಂತೆ ಸ್ಥಳೀಯ ಆಡಳಿತ ನಿಗಾ ವಹಿಸಿದೆ. ಇದರಿಂದ ಗ್ರಾಮದ ರೈತರ ಬೆಳೆದಿರುವ ಸುನಾಮಿ ಸೌತೆಕಾಯಿ ಮಣ್ಣು ಪಾಲಾಗಿದೆ.
ಕ್ಯಾತನಹಳ್ಳಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪಾಸಿಟಿವ್ ಇರುವ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಇದೇ ಗ್ರಾಮ ರೈತ ಕುಮಾರ್ ಸಾವಿರಾರು ರೂಪಾಯಿ ಬಂಡವಾಳ ಹಾಕಿ ಸುನಾಮಿ ಸೌತೆಕಾಯಿಯನ್ನು ಬೆಳೆದಿದ್ದಾರೆ. ಫಸಲು ಕೂಡ ಸಮೃದ್ಧಿಯಾಗಿ ಬಂದಿದೆ. ಆದರೆ, ಬೆಳೆಯನ್ನು ಕಟಾವು ಮಾಡಿಸಲಾಗದೇ ಬೆಳೆದ ಬೆಳೆಯಲ್ಲಾ ಮಣ್ಣು ಪಾಲಾಗುತ್ತಿದೆ.
ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿ ಇದ್ದ ಕುಮಾರ್ ಇದೀಗ ಕೊರೊನಾದ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ತಾವು ಹಾಕಿದ ಬಂಡವಾಳವು ಕೈ ಸೇರಲಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸರ್ಕಾರ ನನ್ನ ನೆರವಿಗೆ ಬರಬೇಕೆಂದು ಕುಮಾರ್ ಮನವಿ ಮಾಡಿದ್ದಾರೆ.