ವಿಜಯಪಥ ಸಮಗ್ರ ಸುದ್ದಿ
ರಾಮನಗರ: ಕೊರೊನಾ ಸಂಕಷ್ಟ ಕಾಲದಲ್ಲಿ ರಾಮನಗರ ಜನರ ಅನುಕೂಲಕ್ಕಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎರಡು ಅಂಬುಲೆನ್ಸ್ ಗಳನ್ನು ಜಿಲ್ಲೆಗೆ ಕೊಡುಗೆ ನೀಡಿದ್ದಾರೆ.
ಮಂಗಳವಾರ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಆಂಬುಲೆನ್ಸ್ ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯ ಜನರಿಗೆ ಆದಷ್ಟು ನೆರವಾಗುವ ದೃಷ್ಟಿಯಿಂದ ಆಂಬುಲೆನ್ಸ್‌ಗಳನ್ನು ನೀಡಿದ್ದೇವೆ ಎಂದರು.
ಇನ್ನು ಇದಕ್ಕೂ ಮೊದಲು ಅಂದರೆ ಭಾನುವಾರ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಅಧಿಕಾರಿಗಳ ಜೊತೆ ವಿಡಿಯೋಕಾನ್ಫರೆನ್ಸ್ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ರಾಮನಗರ ತಾಲೂಕಿನಲ್ಲಿ ಆಂಬುಲೆನ್ಸ್ ಕೊರತೆ ಇರುವುದಾಗಿ ತಿಳಿಸಿದ್ದರು.
ಹಾಗಾಗಿ ರಾಮನಗರಕ್ಕೆ ಎರಡು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಇನ್ನು ಊಟದ ಸಮಸ್ಯೆ ಎದುರಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅದಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.