ವಿಜಯಪಥ ಸಿನಿ ಸುದ್ದಿ
ಬೆಂಗಳೂರು: ಬೆಳ್ಳಿತೆರೆಯಲ್ಲಿ ಡಾ. ರಾಜ್ಕುಮಾರ್ ಸೇರಿದಂತೆ ಅನೇಕ ಹಿರಿಯ ನಟ, ನಟಿಯರೊಂದಿಗೆ ಮಿಂಚಿದ್ದ ಹೆಸರಾಂತ ನಟಿ ಬಿ. ಜಯ (77) ಅವರು ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಜಯ ಅವರು ಅನಾರೋಗ್ಯದಿಂದ ಗುರುವಾರ ಕೊನೆಯುಸಿರೆಳೆದಿದ್ದಾರೆ.
ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಸತಿ ಸಾವಿತ್ರಿ, ಪ್ರತಿಜ್ಞೆ ದೇವರುಕೊಟ್ಟ ತಂಗಿ, ಬನಶಂಕರಿ ಹೀಗೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು.
ಸಿನಿಮಾರಂಗದಲ್ಲಿ ಇನ್ನೂ ಬೇಡಿಕೆ ಇದ್ದಾಗಲೇ ಜಯ, ‘ಟೆಲಿವಿಶನ್ ಕ್ಷೇತ್ರ’ಕ್ಕೆ ಬಂದರು. ಅಂದಿನ ದಿನಗಳಲ್ಲಿ ಮನೆಮಾತಾಗಿದ್ದ, ದೂರದರ್ಶನದಲ್ಲಿ, ಮನೆತನ ಎನ್ನುವ ‘ಮೊದಲ ಧಾರಾವಾಹಿ’ಯಲ್ಲಿ ಕೆಲಸಮಾಡಿದರು. ಈಚೆಗೆ ಅವರು ಪಾಂಡುರಂಗ ವಿಠಲ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು.
‘ಜಯ’ರವರ ತಂದೆ ಬಸಪ್ಪ ಅವರು ಸುಮಾರು 70-80 ವರ್ಷಗಳ ಹಿಂದೆಯೇ ಕೊಳ್ಳೇಗಾಲದಿಂದ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದರು. ಬಸಪ್ಪನವರು ಒಳ್ಳೆಯ ನಟರು. ಅವರು ಸಿನಿಮಾಗಳಲ್ಲಿ ‘ರಾಕ್ಷಸ’,’ಜಲಂದರ’ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದರು.
ಹಾಸ್ಯ ದಿಗ್ಗಜರಾದ ನರಸಿಂಹರಾಜು, ದ್ವಾರಕೀಶ್ ಮುಂತಾದವರೊಂದಿಗೆ ಜಯಾ ನಟಿಸಿದ ಹಾಸ್ಯ ದೃಶ್ಯಗಳು ಇಂದಿಗೂ ಜನಪ್ರಿಯ. 1958ರಲ್ಲಿ ತೆರೆಕಂಡ ‘ಭಕ್ತ ಪ್ರಹ್ಲಾದ’ ಸಿನಿಮಾ ಜಯಾ ಅವರು ಚೊಚ್ಚಲ ಸಿನಿಮಾ. ಅಂಬರೀಷ್ ನಟನೆಯ ‘ಗೌಡ್ರು’ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು.
ಬಿ. ಜಯಾ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಚಿತ್ರರಂಗ ಮತ್ತು ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.