ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಆವರಣದಲ್ಲಿ ನಿರ್ಮಿಸಿರುವ ಈಜುಕೊಳ, ಜಿಮ್ ಕುರಿತು ತನಿಖೆ ನಡೆಸಿ ಏಳು ದಿನದೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಒಳಾಂಗಣ ಈಜುಕೊಳ ಮತ್ತು ಜಿಮ್ ನಿರ್ಮಾಣ ಮಾಡುತ್ತಿರುವ ಕುರಿತು ಪತ್ರಿಕೆಗಳಲ್ಲಿ ಪ್ರಚಾರವಾಗಿದ್ದು, ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸವು ಪಾರಂಪರಿಕ ಕಟ್ಟಡವಾಗಿದ್ದು, ಅಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿರುವುದಿಲ್ಲವೆಂದು ತಿಳಿಸಲಾಗಿದೆ.
ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸವಾದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟಾಗಿರುವ ಬಗ್ಗೆ ಶಾಸಕ ಸಾ.ರಾ.ಮಹೇಶ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ತುಮಕೂರಿನ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಅವರು ಕೊಟ್ಟಿರುವ ದೂರು, ಪತ್ರವನ್ನು ಉಲ್ಲೇಖಿಸಿರುವ ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಕೆ.ಎನ್.ಮೂರ್ತಿ ಅವರು ಪ್ರಾದೇಶಿಕ ಆಯುಕ್ತರಿಗೆ ತುರ್ತು ಪತ್ರದ ಮೂಲಕ ತನಿಖೆಗೆ ಆದೇಶ ನೀಡಿದ್ದಾರೆ.