ವಿಜಯಪಥ ಸಮಗ್ರ ಸುದ್ದಿ
ಮೈಸೂರು: ನಾನು ರಾಜೀನಾಮೆ ನೀಡುವುದರಿಂದ ಕೋವಿಡ್ ಮುಕ್ತವಾಗುತ್ತದೆ ಎಂದಾದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸವಾಲು ಹಾಕಿದರು.
ಪ್ರತಿಪಕ್ಷಗಳ ಟೀಕೆ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆಡಳಿತದಲ್ಲಿ ವೈಫಲ್ಯ ಏನಾದರೂ ಇದ್ದರೆ ಹೇಳಲಿ ತಿದ್ದುಕೊಳ್ಳುತ್ತೇನೆ. ಅದನ್ನು ಬಿಟ್ಟು ಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
11 ನ ವರ್ಚುವಲ್ ಮೀಟಿಂಗ್ ಕರೆದಾಗ ಸಚಿವರ ವಿಶ್ವಾಸದಿಂದ ಎಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಅದಾದ ನಂತರ ಉಸ್ತುವಾರಿ ಸಚಿವರ ವಿರುದ್ಧ ಹೇಳಿಕೆ ಕೊಟ್ಟರೆ ಕಾರ್ಯಾಧ್ಯಕ್ಷ ಸ್ಥಾನ ಉಳಿಯುತ್ತದೆ ಎಂಬ ಮನೋಭಾವ ಧ್ರುವನಾರಾಯಣ್ ಅವರಲ್ಲಿ ಇರಬೇಕು. ಮೊದಲು ಕಾರ್ಯಾಧ್ಯಕ್ಷ ಎಂದರೇನು ಎಂಬುದನ್ನು ತಿಳಿದುಕೊಳ್ಳಲಿ. ನನ್ನ ಬಗ್ಗೆ ಅವರು ಮಾತನಾಡಲು ಅಪ್ಗ್ರೇಡ್ ಆದರೆ ಒಳ್ಳಯದು ಎಂದು ತಿರುಗೇಟು ನೀಡಿದರು.