ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹಂತಹಂತವಾಗಿ 0.3 ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದೆ.
ಈಗಾಗಲೇ ಹಲವು ಜಿಲ್ಲೆಗಳು ಅನ್‌ಲಾಕ್ ಆಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಇದೀಗ ಜುಲೈ 5ರಿಂದ ಅನ್‌ಲಾಕ್ 0.3 ಜಾರಿಯಾಗುವ ನಿರೀಕ್ಷೆಯಿದ್ದು, ಅದರಲ್ಲಿ ಮಾಲ್, ಸಿನಿಮಾ ಮಂದಿರಗಳು, ಪಬ್, ಕ್ಲಬ್, ಬಾರ್‌ಗಳಿಗೆ ಅನುಮತಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಸದ್ಯಕ್ಕೆ ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಮಾಣ 1.97ರಷ್ಟಿರುವ ಕಾರಣ ಅನ್‌ಲಾಕ್ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಅದಕ್ಕಾಗಿ ತಜ್ಞರ ಜತೆಗೆ ಚರ್ಚೆ ಮಾಡುವ ನಿಟ್ಟಿನಲ್ಲೂ ಮುಂದಾಗುತ್ತಿದೆ.
ಈಗ ಅಂಗಡಿ ಮಳಿಗೆಗಳಿಗೆ ಅವಕಾಶ ಕೊಟ್ಟಿರುವಂತೆಯೇ ಮಾಲ್‌ಗಳನ್ನು ಸಂಜೆವರೆಗೂ ತೆರೆಯಲು ಅನುಮತಿ ನೀಡಬಹುದಾಗಿದೆ. ಅತಿ ಕಡಿಮೆ ಜನರ ಪ್ರವೇಶಕ್ಕೆ ಅನುಮತಿ ನೀಡಲಿದ್ದು, ಮಕ್ಕಳಿಗೆ ಪ್ರವೇಶ ನಿರ್ಬಂಧ ಹೇರುವ ಸಂಭವವಿದೆ.
ಬಾರ್‌ಗಳಲ್ಲಿಯೂ ಟೇಬಲ್ ಸರ್ವೀಸ್‌ಗೆ ಅವಕಾಶ ನೀಡುವ ಬಗ್ಗೆ ಈಗಾಗಲೇ ಅನುಮತಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಸಿನಿಮಾ ಮಂದಿರಗಳಿಗೆ ಇಷ್ಟು ಬೇಗ ಅವಕಾಶ ನೀಡುವುದು ಅನುಮಾನ. ಇದರ ನಡುವೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.
ಏಪ್ರಿಲ್ 27ರಿಂದ ಕರ್ನಾಟಕದಲ್ಲಿ ಜಾರಿ ಮಾಡಲಾಗಿದ್ದ ಕೋವಿಡ್ -19 ಲಾಕ್‌ಡೌನ್ ಅನ್ನು ಜೂನ್ 14ರ ನಂತರ ಅಲ್ಪ ಸಡಿಲಿಕೆ ಮಾಡಲಾಗಿತ್ತು. ಜೂನ್ 21ರ ನಂತರ ಅನ್‌ಲಾಕ್ 0.2 ಘೋಷಣೆಯಾಗಿದ್ದು, ಕೆಲವು ನಿರ್ಬಂಧಗಳೊಂದಿಗೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಮೊದಲು ಹದಿನಾರು ಜಿಲ್ಲೆಗಳಲ್ಲಿ ಅನ್‌ಲಾಕ್ ಘೋಷಣೆ ಮಾಡಿ ನಂತರ ಆ ಪಟ್ಟಿಗೆ 6 ಜಿಲ್ಲೆಗಳನ್ನು ಸೇರಿಸಲಾಗಿದೆ.
ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಹುತೇ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ 0.3 ಅನ್‌ಲಾಕ್ ಘೋಷಣೆ ಮಾಡುವುದು ದೃಢವಾಗುತ್ತಿದೆ.