ಬೆಂಗಳೂರು: ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ದಕ್ಷಿಣ ವಲಯದಲ್ಲಿ ಸಾರಿಗೆ ಸಂಸ್ಥೆಯ ಕಾನೂನನ್ನೇ ಗಾಳಿಗೆ ತೂರಿರುವ ಅಧಿಕಾರಿಗಳು ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣ/ ಜಂಕ್ಷನ್/ ನಿಯಂತ್ರಣ ಬಿಂದುಗಳಿಗೆ ತಮಗೆ ಇಷ್ಟವಾದ ಹೀರಿಯ ನಿರ್ವಾಹಕ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಜುಲೈ 2ರಿಂದ ಜಾರಿಗೆ ಬರುವಂತೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿರುವ ವಿವಿಧ ಘಟಕಗಳಲ್ಲಿನ 45 ಹಿರಿಯ ನಿರ್ವಾಹಕರನ್ನು ಜೇಷ್ಠತೆ ಆಧಾರದ ಮೇಲೆ ದಕ್ಷಿಣ ವಲಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ನಿಯೋಜಿಸಿ ದಕ್ಷಿಣ ವಲಯ ವಿಭಾಗಿಯ ನಿಯಂತ್ರಣ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಆದರೆ, ಜುಲೈ 2ರಂದು ನೀಯೋಜನೆ ಗೊಂಡಿರುವ ಹಿರಿಯ ನಿರ್ವಾಹಕರಿಗಿಂತಲೂ ಹಿರಿಯ ನಿರ್ವಾಹಕರು ಇದ್ದು, ಅವರ ಸೇವಾ ಹಿರಿತನವನ್ನು ಪರಿಗಣಿಸಿ ಕಾನೂನು ರೀತಿಯಲ್ಲಿ ನಿಯೋಜನೆ ಮಾಡಬೇಕಿದ್ದ ದಕ್ಷಿಣ ವಲಯ ಡಿಸಿ ಸೇವಾ ಹಿರಿತನದ ಹೆಸರಿನಲ್ಲಿ ಕಾನೂನನ್ನೇ ಗಾಳಿ ತೂರಿ ತಮಗೆ ಇಷ್ಟ ಬಂದವರನ್ನು ಜೇಷ್ಠತೆ ಆಧಾರದ ಹೆಸರಿನಲ್ಲಿ ನಿಯೋಜನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿರುವುದರಿಂದ ತಮ್ಮ ಸೇವಾ ಹಿರಿತನವನ್ನು ಪರಿಗಣಿಸಿಲ್ಲ ಎಂದು ಹಲವು ಹಿರಿಯ ನಿರ್ವಾಹಕರು ನೋವು ತೋಡಿಕೊಂಡಿದ್ದಾರೆ. ಇಷ್ಟೇ ಅಲ್ಲದೇ 20-25 ವರ್ಷಗಳಿಂದಲೂ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನಿರ್ವಾಹಕರಿಗೆ ಮಹಿಳಾ ಮೀಸಲಾತಿಯಡಿ (ಶೇ.33) ಇದುವರೆಗೂ ಯಾವುದೇ ಬಡ್ತಿ, ಸೇವಾ ಹಿರಿತನ ಆಧಾರೆದ ಮೇರೆಗೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ನಿಯೋಜನೆ ಮಾಡಿಲ್ಲ ಎಂಬ ಆರೋಪವು ದಟ್ಟವಾಗಿ ಕೇಳಿ ಬಂದಿದೆ.
ಹೀಗೆ ಸಂಸ್ಥೆಯಲ್ಲಿನ ಕಾನೂನನ್ನು ಗಾಳಿಗೆ ತೂರುತ್ತಿರುವ ಅಧಿಕಾರಿಗಳ ವಿರುದ್ಧ ಸಾರಿಗೆ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೂಕ್ತ ಕಾನೂನು ಕ್ರಮ ಜರುಗಿಸಿ ಜೇಷ್ಠತೆ ಆಧಾರದ ಮೇರೆಗೆ ಮತ್ತು ಮಹಿಳಾ ಮೀಸಲಾತಿಯಡಿ ಬಡ್ತಿ ನೀಡಬೇಕು ಎಂದು ಹಿರಿಯ ನಿರ್ವಾಹಕರು ಮನವಿ ಮಾಡಿದ್ದಾರೆ.
ದಕ್ಷಿಣ ವಲಯ ವಿಭಾಗಿಯ ನಿತಂತ್ರಣಾಧಿಕಾರಿ ಹೊರಡಿಸಿರುವ ಆದೇಶದ ವಿವರ: ದಕ್ಷಿಣ ವಲಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸಂಚಾರ ಸಿಬ್ಬಂದಿಗಳ ಕೊರತೆ ಇರುವುದರಿಂದ ಹಾಗೂ ಜೂನ್ 21 ರಿಂದ ಸರ್ಕಾರವು ಎರಡನೇ ಬಾರಿ ಲಾಕ್‌ಡೌನ್‌ಸಡಿಲಿಕೆ ಮಾಡಿರುವುದರಿಂದ ಪ್ರಮುಖ ಬಸ್ ನಿಲ್ದಾಣ/ ಜಂಕ್ಷನ್/ ನಿಯಂತ್ರಣ ಬಿಂದುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ದಟ್ಟಣೆ ಮತ್ತು ಸಂಪರ್ಕ ಸಾರಿಗೆ ಸೇವೆ ಒದಗಿಸಲು,
ಪ್ರಮುಖ ಬಸ್ ನಿಲ್ದಾಣಗಳಿಂದ ನಿಗದಿತ ಸಮಯಕ್ಕೆ ಸಾರಿಗೆಗಳ ಸುಗಮ ಕಾರ್ಯಾಚರಣೆಗೆ ಸಂಚಾರ ಸಿಬ್ಬಂದಿಗಳ ಕೊರತೆ ಇರುವುದರಿಂದ ಕೇಂದ್ರ ಕಚೇರಿ ಆದೇಶದ ಮೇರೆಗೆ, ದಕ್ಷಿಣ ವಲಯದ ಘಟಕಗಳಿಂದ ಜೇಷ್ಠತೆ ಆಧಾರದ ಮೇಲೆ ನಿರ್ವಾಹಕ ಸಿಬ್ಬಂದಿಗಳನ್ನು ಜುಲೈ2 ರಿಂದ ಜಾರಿಗೆ ಬರುವಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸಲು, ಸಾರಿಗೆಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳುವ ಅಥವಾ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.