ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಸಂಸದ ಸ್ಥಾನಕ್ಕೆ ಆರ್ಹರಲ್ಲ, ಅವರು ನಟೋರಿಯಸ್ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.
ಸುಮಲತಾ ಅವರು ತಮ್ಮ ಕ್ರಿಮಿನಲ್ ಮೈಂಡ್ ಅನ್ನು ಚಿತ್ರರಂಗದಲ್ಲಿ ಬಳಸಲಿ. ರಾಜಕಾರಣಕ್ಕೆ ಕ್ರಿಮಿನಲ್ ಮೈಂಡ್ ಅಪ್ಲೇ ಮಾಡಬೇಡಿ. ಡ್ಯಾಂ ಬಿರುಕು ಬಿಟ್ಟಿದೆ ಅಂತಾ ನೂರು ಬಾರಿ ಹೇಳಿ ಆಣೆಕಟ್ಟಿಗೆ ದೃಷ್ಟಿಯಾಗಿಸಿದ್ದಾರೆ. ಎಂಪಿಯವರ ಕೆಟ್ಟ ಕಣ್ಣು ನಮ್ಮ ಆಣೆಕಟ್ಟೆಗೆ ತಾಗಿದೆ. ಹಾಗಾಗಿ ಡ್ಯಾಂನಲ್ಲಿ ಪೂಜೆ ಮಾಡಿಸೋದಕ್ಕೆ ಹೇಳಿದ್ದೇನೆ ಎಂದು ವ್ಯಂಗ್ಯ ವಾಡಿದರು.
1995-2008ರಲ್ಲಿ ಅಂಬರೀಷ್ ಸಂಸದರಾಗಿದ್ದಾಗಲೇ ಮಂಡ್ಯ ಹಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ಶುರುವಾಗಿತ್ತು. ಈಗ ಅದೇ ಅಂಬರೀಷ್ ಅವರ ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡ್ತಾ ಇದ್ದೀರಾ? ನೀವು ಮೊದಲು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಿನ್ನೆ ನೋಡಿದ ಹಳ್ಳ-ಕೊಳ್ಳಗಳೆಲ್ಲ ಅಂಬರೀಷ್ ಅವರ ಕಾಲದಲ್ಲಿ ಆಗಿರೋದು.
ಹಂಗರಹಳ್ಳಿಯಲ್ಲಿ 2007ರ ಹಿಂದೆ ಅಕ್ರಮ ಗಣಿಗಾರಿಕೆ ನಡೆದಿದೆ. ಅಂಬರೀಷ್ ಅವರ ಕಾಲದಲ್ಲಿಯೇ ಅಕ್ರಮ ದಾಳಿ ನಡೆದಿರೋದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಸಂಸದರ ಎಲ್ಲ ಡೀಲ್ ಗಳ ಸಾಕ್ಷಿಗಳು ನಮ್ಮ ಬಳಿಯಲ್ಲಿದ್ದು, ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುವ ವೇಳೆ ತಿಳಿಸಿದರು.
ಅದು ಸಂಸದರ ವ್ಯಕ್ತಿತ್ವ ತೋರಿಸುತ್ತೆ
ಆಣೆಕಟ್ಟಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಮೈನಿಂಗ್ ಮಾಡಬಾರದು ಅಂತ ಕುಮಾರಸ್ವಾಮಿ ಅವರು ಕಾನೂನು ಮಾಡಿದ್ದರು. ಆದ್ರೆ ನಿನ್ನೆ ಸಂಸದರು 30 ಕಿಲೋ ಮೀಟರ್ ದೂರದಲ್ಲಿರುವ ಗಣಿಗಾರಿಕೆಗಳಿಗೆ ಭೇಟಿ ನೀಡಿದ್ದಾರೆ. ಮೊದಲು 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಅಕ್ರಮ ಗಣಿಗಾರಿಕೆ ಬಂದು ನೋಡಿ ಎಂದು ಸವಾಲು ಹಾಕಿದರು.
ಈ ಹಿಂದೆ ಸುನಂದಾ ಜಯರಾಂ ನಂತಹ ರೈತ ಮಹಿಳೆಯರು ಅಹೋರಾತ್ರಿ ಧರಣಿ ಮಾಡಿ ಆಣೆಕಟ್ಟು ಕಾಪಾಡಿಕೊಂಡಿದ್ದರು. ಆ ರೀತಿ ರೈತ ಭಾಷೆಯಲ್ಲಿ ಕುಮಾರಣ್ಣ ಮಾತಾನಾಡಿದ್ರೆ, ಇವರೇ ಬೇರೆ ವ್ಯಾಖ್ಯಾನಿಸಿಕೊಂಡಿದ್ದಾರೆ. ಸಂಸದರು ಇಷ್ಟು ನೀಚಮಟ್ಟದಲ್ಲಿ ಅರ್ಥೈಸಿಕೊಂಡಿರುವ ಕಲ್ಪನೆ ಕುಮಾರಣ್ಣನಿಗೆ ಇರಲಿಲ್ಲ. ಅವರೇ ಬೇರೆ ಅರ್ಥೈಸಿಕೊಂಡು ಮಾತಾಡ್ತಿರೋದು ಅದು ಸಂಸದರ ವ್ಯಕ್ತಿತ್ವವನ್ನು ತೋರಿಸುತ್ತೆ ಎಂದರು.
ನಮ್ಮ ಬಳಿ ರಾಜಕೀಯದಲ್ಲಿ ಪ್ರಜ್ವಲ್, ನಿಖಿಲ್ ಎಂಬ ಮಿಸೈಲ್ ಇವೆ ಅಂತಾ ನಾನು ಹೇಳಿದ್ದೆ. ಆದ್ರೆ ಅದನ್ನು ನೀವು ನಿಮ್ಮ ನಟೋರಿಯಸ್ ಬುದ್ಧಿ ಮೂಲಕ ತಿರುಚಿದ್ದೀರಿ. ನೀವು ಸಂಸದ ಸ್ಥಾನಕ್ಕೆ ಅರ್ಹರಲ್ಲ. ನೀವು ಬೆಂಗಳೂರಿನ ಹೋಟೆಲ್ ಗೆ ನಿಮ್ಮ ಇಬ್ಬರು ಬೆಂಬಲಿಗರನ್ನು ಯಾವ ಡೀಲ್‌ಗೆ ಕಳಿಸಿದ್ರಿ ಎಂಬ ಸಾಕ್ಷಿ ನಮ್ಮ ಬಳಿ ಇದೆ ಎಂದು ಗಭೀರ ಆರೋಪವನ್ನು ಮಾಡಿದರು.