ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಮಾಡಿರುವ ಗಂಭೀರ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸಲು ಟ್ರೋಲರ್‌ಗಳನ್ನು ರೋಹಿಣಿ ಸಿಂಧೂರಿ ಅವರು ಬಳಕೆ ಮಾಡಿದ್ದಾರೆ ಎಂಬ ಆರೋಪವನ್ನು ರೂಪಾ ಅವರು ಮಾಡಿದ್ದಾರೆ. ಇದಕ್ಕೆ ಕೆಲವೊಂದು ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್‌ಗಳನ್ನು ಅವರು ಹಂಚಿಕೊಂಡಿದ್ದಾರೆ.
ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಕುರಿತಾಗಿ ರೂಪಾ ಅವರು ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ ರೋಹಿಣಿ ಅವರ ನಡೆಯನ್ನು ಖಂಡಿಸಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.
ಹೀಗಾಗಿ ಜೂನ್ 25 ರಂದು ವ್ಯಕ್ತಿಯೊಬ್ಬರೊಂದಿಗೆ ನಡೆದ ವಾಟ್ಸಪ್ ಮಾತುಕತೆಯ ವಿವರಗಳನ್ನು ಹಂಚಿಕೊಂಡಿದ್ದು ಇದರಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕುರಿತಾದ ನನ್ನ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಟ್ರೋಲ್ ತಂಡಗಳನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಮಾಡಿದ್ದಾರೆ.
ರೂಪಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ವಿವರ: “ ಈ ಸಂಭಾಷಣೆ 25 ನೇ ಜೂನ್ ನಡೆದದ್ದು. ಸಂಭಾಷಣೆ ಸ್ವಯಂ ವೇದ್ಯ. ನನಗೆ ಹೆಚ್ಚಾಗಿ ತಿಳಿಯದ ಈ ವ್ಯಕ್ತಿ ಹೇಳಿದ್ದು ನಿಜ ಇದ್ದರೆ, ಅಂದರೆ, ನಾನು ಹಾಕುವ ನನ್ನ ಅಭಿಪ್ರಾಯಕ್ಕೆ ಪೇಯ್ಡ್ ಟ್ರೋಲರ್ ಗಳು ನಕಾರಾತ್ಮಕವಾಗಿ, ಅನಾಗರಿಕ ರೀತಿಯಲ್ಲಿ ಪ್ರತಿಕ್ರಿಯಿಸಿದರ ಹಿಂದೆ ಅಂಥವರ ವಿಕೃತ ಮನೋಭಾವ ಎದ್ದು ತೋರುತ್ತದೆ.
ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ. ಹಾಗೆ, ಪೇಯ್ಡ್ ಟ್ರೋಲರ್‌ಗಳು ಒಬ್ಬ ಅಧಿಕಾರಿಯ ಪರ ಕೆಲಸ ಮಾಡುತ್ತಾ, ಇನ್ನೊಬ್ಬ ಅಧಿಕಾರಿಯ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ಹೊಸ ಸಾಮಾನ್ಯ? ಆದರೆ, ಆ ಪೇಯ್ಡ್/ ಬಾಡಿಗೆ ಟ್ರೊಲ್ ಗಳಿಗೆ ಗೊತ್ತಿಲ್ಲವೆ. ನಾಯಿ ಬೊಗಳಿದರೆ ಅಂಬಾರಿ ಹೋಗೋದು ನಿಲ್ಲಲ್ಲ. ಹಾಗೇ ಈ ವ್ಯಕ್ತಿ ಹೇಳಿದ ವಿಷಯ ಸತ್ಯವೇ, ತನಿಖೆ ಆಗಲಿ” ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪೂರಕ ಎಂಬಂತೆ ಅವರು ವ್ಯಕ್ತಿಯ ಜತೆಗೆ ನಡೆಸಿದ ವಾಟ್ಸಪ್ ಮಾತುಕತೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ಟ್ರೋಲ್ ಏಜನ್ಸಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದರು. ಆದರೆ,ಅವರ ಹೆಸರು ಹಾಗೂ ಏಜನ್ಸಿ ಹೆಸರನ್ನು ಉಲ್ಲೇಖಿಸದೆ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ವಿರುದ್ಧ ರೂಪಾ ಮೌದ್ಗಿಲ್ ಇಂತಹದೊಂದು ಗಂಭೀರ ಆರೋಪ ಮಾಡದ್ದಾರೆ.