ಬೆಂಗಳೂರು: ಶಾಲೆ ಶುಲ್ಕ ಪಾವತಿಸುವ ಸಮರಕ್ಕೆ ಪ್ರತಿಭಾನ್ವಿತ ವಿದ್ಯಾರ್ಥಿನಿ ಪರೀಕ್ಷೆಯಿಂದ ವಂಚಿತಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಾನು 9ನೇ ತರಗತಿಯಲ್ಲಿ 96% ಅಂಕ ಗಳಿಸಿದ್ದೇನೆ, ಹೀಗಾಗಿ 10 ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿ ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.
ಕೊರಟಗೆರೆಯ ಹನುಮಂತಪುರ ನಿವಾಸಿ ಗ್ರೀಷ್ಮ ನಾಯಕ್.ಎನ್ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2020-21 ನೇ ಸಾಲಿನ 10 ನೇ ತರಗತಿ ಅಭ್ಯಾಸ ಮಾಡುತ್ತಿದ್ದಳು. ಕಳೆದ ವರ್ಷದ ಶಾಲಾ ಶುಲ್ಕ ಮತ್ತು ವಸತಿ ಮತ್ತು ಊಟದ ಶುಲ್ಕ ಬಾಕಿಯಿರುವುದಕ್ಕೆ, ಶಾಲಾ ಸಂಸ್ಥೆ ಎಸ್ಎಸ್ಎಲ್ಸಿ ಪರೀಕ್ಷೆಗೆ ನೋಂದಾಯಿಸಿಲ್ಲ.
ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಗ್ರೀಷ್ಮ ನಾಯಕ್.ಎನ್ ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಖಾಸಗಿ ಶಿಕ್ಷಣ ಸಂಸ್ಥೆ ಪರೀಕ್ಷೆಗೆ ನಿರ್ಬಂಧ ಹೇರಿದೆ. ಹೀಗಾಗಿ ನೊಂದ ವಿದ್ಯಾರ್ಥಿನಿ ಡಿಸೆಂಬರ್ ನಲ್ಲಿಯೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಬಳಿ ತನ್ನ ಸಮಸ್ಯೆಯನ್ನು ತೋಡಿಕೊಂಡಿದ್ದಳು.
ಆದರೆ, ಶಿಕ್ಷಣ ಸಚಿವ ಮನಸ್ಸು ಮಾತ್ರ ಕರಗಿಲ್ಲ. ಅಂದರೆ ಸಚಿವರ ಶಿಕ್ಷಣ ಸಂಸ್ಥೆಯ ಪರ ನಿಂತಂತೆ ಕಾಣುತ್ತಿದೆ. ಒಬ್ಬ ಪ್ರತಿಭಾವಂತಿ ವಿದ್ಯಾರ್ಥಿನಿಗೆ ಈ ಅನ್ಯಾಯವಾಗುತ್ತಿರುವಾಗ ಸಿಡಿದೇಳಬೇಕಾದ ಸಚಿವರೆ ಈ ರೀತಿ ನಡೆದು ಕೊಂಡರೆ ಹೇಗೆ?
ಇನ್ನು ಪರೀಕ್ಷೆ ಬರೆಯಲೇ ಬೇಕು ಎಂದು ನಿರ್ಧರಿಸಿದ ವಿದ್ಯಾರ್ಥಿನಿ ಸದ್ಯ ನ್ಯಾಯಕ್ಕಾಗಿ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾಳೆ.
ಇನ್ನು ಈ ವಿಷಯ ಗಮನಕ್ಕೆ ಬಂದ ಮೇಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿನಿಗೆ ಬರುವ ಆಗಸ್ಟ್ನಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಹೇಳಿ ಕಳುಹಿಸಿದ್ದಾರೆ. ಹೀಗಾಗಿ ನೊಂದ ವಿದ್ಯಾರ್ಥಿನಿ ಪ್ರಸಕ್ತ ಸಾಲಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾಳೆ.
ಜತೆಗೆ ಕೊರೊನಾ ಸೋಂಕಿತ ಮಕ್ಕಳಿಗೂ ಎಕ್ಸಾಂ ಬರೆಯಲು ಅವಕಾಶ ನೀಡಿದ್ದೀರಾ, ಅವರಿಗೆ ಪ್ರತ್ಯೇಕ ಕೊಠಡಿ ಅಥವಾ ಕೋವಿಡ್ ಕೇರ್ ಸೆಂಟರ್ನಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಿದ್ದೀರಾ. ಪರೀಕ್ಷೆ ಬರೆಯುವ ಉತ್ಸಾಹ ಇರುವ ನನಗೆ ಮಾತ್ರ ಯಾಕಿಲ್ಲ ಅವಕಾಶ ಎಂದು ಗ್ರೀಷ್ಮಾ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ನೀವು ನಿಗದಿಪಡಿಸಿದ ಎಕ್ಸಾಂ ಸೆಂಟರ್ಗೆ ಬಂದು ಪರೀಕ್ಷೆ ಎದುರಿಸಲು ಗ್ರೀಷ್ಮಾ ಸಿದ್ಧವಾಗಿದ್ದಾಳೆ ಎಂದು ಗ್ರೀಷ್ಮಾ ಪೋಷಕರು ತಿಳಿಸಿದ್ದು, ಇದೇ 19 ಮತ್ತು 22 ರಂದು ಪರೀಕ್ಷೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ಶಿಕ್ಷಣ ಇಲಾಖೆಯಿಂದ ನ್ಯಾಯ ಸಿಗದ ಕಾರಣ ಮಕ್ಕಳ ಹಕ್ಕುಗಳ ಮೊರೆ ಹೋದ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು ಇಂದು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.