ಬೆಂಗಳೂರು: ಸಾರಿಗೆ ನೌಕರರ ಪರವಾಗಿ ರಾಜ್ಯ ಹೈ ಕೋರ್ಟ್ ನಲ್ಲಿ PIL ರಿಟ್‌ಪಿಟಿಷನ್ ನಂ.8012/2021 ಈ ಪ್ರಕರಣದಲ್ಲಿ ಜಂಟಿಯಾಗಿ ವಕಾಲತ್ತು ವಹಿಸಿದ್ದ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ತಮ್ಮ ಕಾರ್ಯಭಾರ ಹೆಚ್ಚಾದ್ದರಿಂದ ಇನ್ನು ಮುಂದೆ ನೌಕರರಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಭಾಗಿಯಾಗುತ್ತಿಲ್ಲ.
ಈ ಬಗ್ಗೆ ವಿಜಯಪಥಕ್ಕೆ ಸ್ಪಷ್ಟಪಡಿಸಿದ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಿವಿಧ ಪ್ರಕರಣಗಳು ಹೆಚ್ಚಾಗಿರುವುದರಿಂದ ಹೆಚ್ಚಿನ ಸಮಯ ದೆಹಲಿಯಲ್ಲೇ ಕಳೆಯಬೇಕಿದೆ. ಹೀಗಾಗಿ ನೌಕರರ ಪರ ವಕಾಲತು ವಹಿಸಿಕೊಂಡು ನಾವು ದೆಹಲಿಯಲ್ಲಿ ಇದ್ದರೆ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಆದ್ದರಿಂದ ಅಲ್ಲಿ ಮತ್ತು ಇಲ್ಲಿ ಎರಡುಕಡೆಗಳಲ್ಲೂ ಓಡಾಡುವುದು ಸ್ವಲ್ಪ ಕಷ್ಟಸಾಧ್ಯವಾದ್ದರಿಂದ ಸಾರಿಗೆ ನೌಕರರಿಗೆ ಸಂಬಂಧಸಿದ ಈ ಪ್ರಕರಣವನ್ನು ಇನ್ನು ಮುಂದೆ ಹೈ ಕೋರ್ಟ್ ನ ಹಿರಿಯ ವಕೀಲರಾದ ಅಮೃತೇಶ್ ಅವರು ನೋಡಿಕೊಳ್ಳುತ್ತಾರೆ.
ಈ ಬಗ್ಗೆ ಕಳೆದ ಎರಡು ದಿನದ ಹಿಂದೆಯೇ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ನೌಕರರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು (ಎನ್‌ಒಸಿ) ನೀಡಿದ್ದು ಇನ್ನು ಮುಂದೆ ನೌಕರರ ಯಾವುದೇ ಪ್ರಕರಣಗಳಿಗೂ ನಮಗೂ ಸಂಬಂಧವಿರುವುದಿಲ್ಲ.
ಹೀಗಾಗಿ ಮುಂದಿನ ದಿನಗಳಲ್ಲಿ ಏನೇ ಕೇಸು ಇದ್ದರೂ ಕೂಟದ ಪದಾಧಿಕಾರಿಗಳು ಮತ್ತು ವಕೀಲರಾದ ಅಮೃತೇಶ್ ಅವರು ನೋಡಿಕೊಳ್ಳುತ್ತಾರೆ.
ಇನ್ನು ಇಲ್ಲಿಯವರೆಗೂ ನಾನು ಹಲವಾರು ನೌಕರರಿಗೆ ಉಚಿತವಾಗಿ ಜಾಮೀನು ಕೊಡಿಸಿದ್ದು, ಇಲ್ಲಿಯವರೆಗೂ ನಡೆದ ಯಾವುದೇ ಪ್ರಕರಣದಲ್ಲೂ ಒಂದು ರೂಪಾಯಿಯನ್ನು ಸಂಭಾವನೆ ಪಡೆಯದೆ ಉಚಿತವಾಗಿ ನನ್ನ ಸೇವೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಒಂದುವೇಳೆ ಈ ಪ್ರಕರಣ ಬಂದರೆ ಅಲ್ಲಿಯೂ ಉಚಿತವಾಗಿ ನೌಕರರ ಪರ ಪ್ರಕರಣಗಳ ವಕಾಲತು ವಹಿಸುತ್ತೇನೆ ಎಂದು ವಿಜಯಪಥಕ್ಕೆ ತಿಳಿಸಿದ್ದಾರೆ.
ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವ ವೇಳೆಯೇ ಕೂಟದ ಅಧ್ಯಕ್ಷ ಚಂದ್ರು ಅವರಿಗೆ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಲ್ಲಿಯವರೆಗೆ ನಡೆಸಿಕೊಡುತ್ತೇನೆ. ಸುಪ್ರೀಂ ಕೊರ್ಟ್‌ನಲ್ಲಿ ಪ್ರಕರಣಗಳು ಹೆಚ್ಚಾದರೆ ಮುಂದಿನ ವಕಾಲತ್ತನ್ನು ವಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದೆವು. ಅದರಂತೆ ಈ ಪ್ರಕಣವನ್ನು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ಕಡೆ ಹೆಚ್ಚಿನ ಗಮನ ನೀಡಬೇಕಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಒಸಿ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ ನಿತ್ಯ ನೂರಾರು ನೌಕರರು ನಮ್ಮ ಕಚೇರಿಗೆ ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದರು, ಇನ್ನು ಮುಂದೆ ನಾನು ದೆಹಲಿಯಲ್ಲಿ ಹೆಚ್ಚಾಗಿರುವುದರಿಂದ ನೀವು ನಮ್ಮನ್ನು ಭೇಟಿ ಮಾಡಲು ಸಾಧ್ಯವಿಲ್ಲ. ನಿಮ್ಮ ಹೋರಾಟಕ್ಕೆ ಜಯ ಸಿಗಲಿ ಎಂದು ಹಾರೈಸಿದ್ದಾರೆ.