ಬೆಂಗಳೂರು: ಸಿಎಂ ರೇಸ್ನಲ್ಲಿದ್ದ ಬೆಲ್ಲದ್, ನಿರಾಣಿ ಪೈಕಿ ಒಬ್ಬರನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕ್ಲೈಮ್ಯಾಕ್ಸ್ನಲ್ಲಿ ಇವರಿಬ್ಬರಿಗೂ ಪಟ್ಟ ತಪ್ಪಿದ್ದು ಲಾಬಿ ಮಾಡದ ಬಸವರಾಜ ಬೊಮ್ಮಾಯಿ ಅವರಿಗೆ ಒಲಿದು ಬಂದಿದೆ.
ಮಾಧ್ಯಮಗಳಲ್ಲಿ ಹಲವಾರು ಹೆಸರುಗಳು ಕೇಳಿ ಬಂದಿದ್ದವು ಆದರೆ, ಅಂತಿಮವಾಗಿ ಏನು ಗೊತ್ತಿಲ್ಲದಂತೆ ಹೈ ಕಮಾಂಡ್ ಭೇಟಿ ಮಾಡಿದ್ದ ಬೊಮ್ಮಾಯಿ ಯಾವ ವಿಷಯವನ್ನು ಬಿಟ್ಟುಕೊಡದೆ. ಏನು ಗೊತ್ತಿಲ್ಲದವರಂತೆ ಇದ್ದರು.
ಮಾಧ್ಯಮಗಳು ಆ ಬಗ್ಗೆ ಕೊಂಚವು ಯೋಚಿಸದೆ ತಮಗಿಷ್ಟವಾದ ನಾಯಕರ ಬಗ್ಗೆ ಪುಂಕಾನುಪುಂಖವಾಗಿ ವಿಶೇಷ ವರದಿ ಮಾಡಿದ್ದೆ ಮಾಡಿದ್ದು, ಅದರಲ್ಲು ತಾವು ಗುರುತಿಸಿದ ವ್ಯಕ್ತಿಗೆ ಪಟ್ಟ ಸಿಕ್ಕಿದರೆ ನಾವೇ ಮೊದಲು ಮಾಡಿದ್ದು ಎಂದು ಕೊಚ್ಚಿಕೊಳ್ಳುವ ಪರಿ ನೋಡಬೇಕು. ಈಗ ಯಾರು ಊಹಿಸದ ವ್ಯಕ್ತಿ ಸಿಎಂ ಆಗಿದ್ದಾರೆ ಎಂದು ಹೇಳುತ್ತಿವೆ.
ಆದರೆ ವಾಸ್ತವದಲ್ಲಿ ಬೊಮ್ಮಾಯಿ ಅವರಿಗೇ ಪಟ್ಟ ಕಟ್ಟಬೇಕು ಎಂದು ಬಿಎಸ್ವೈ ಮಾತು ತಗೆದುಕೊಂಡ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂಬ ಬಗ್ಗೆ ಮಾಧ್ಯಮಗಳಿಗೆ ಗೊತ್ತೆಆಗಲಿಲ್ಲ. ಆದರೂ ತಮ್ಮ ಊಹೆಗೆ ತಕ್ಕಂತೆ ಸುದ್ದಿ ಬಿತ್ತರಿಸುತ್ತ ಹೋದವು. ಒಂದು ಜಾಡು ಹಿಡಿದು ಆ ಮೂಲಕ ಇವರೆ ಮುಂದಿನ ಸಿಎಂ ಆಗುತ್ತಾರೆ ಎಂಬುವಷ್ಟು ಮಾಹಿತಿ ಕಲೆಹಾಕಲು ಸಾಧ್ಯವಾಗದ ಇಂದಿನ ಮಾಧ್ಯಮಗಳು ದೇಶದ ಭವಿಷ್ಯ ರೂಪಿಸುವ ಬಗ್ಗೆ ಹೇಗೆ ವರದಿ ಮಾಡುತ್ತವೆ ಎಂಬುವುದು ಯಕ್ಷ ಪ್ರಶ್ನೆ?
ಇನ್ನು ಮುಖ್ಯಮಂತ್ರಿ ರೇಸ್ನಲ್ಲಿದ್ದ ನಿರಾಣಿ ಮತ್ತು ಬೆಲ್ಲದ್ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಅಷ್ಟೇ ಅಲ್ಲದೇ ಇವರಿಬ್ಬರೂ ವಾರಣಾಸಿಗೆ ತೆರಳಿ ಗಂಗೆಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದರು. ಹೀಗಾಗಿ ನಿರಾಣಿ ಮತ್ತು ಬೆಲ್ಲದ್ ಮಧ್ಯೆ ಒಬ್ಬರಿಗೆ ಪಟ್ಟ ಸಿಗಬಹುದು ಎಂಬ ಮಾತು ಬಿಜೆಪಿ ಮೂಲಗಳಿಂದ ತಿಳಿದುಬಂದಿತ್ತು.
ನಿರಾಣಿಗೆ ಸಿಎಂ ಕುರ್ಚಿ ಕೈತಪ್ಪಿದ್ಹೇಗೆ?: ನಿರಾಣಿಗೆ ಮಾಸ್ ಇಮೇಜ್ ಇಲ್ಲ. ಇದರ ಜತೆ ಯಡಿಯೂರಪ್ಪ ಕೃಪಾಕಟಾಕ್ಷ ಸಿಗಲಿಲ್ಲ. ಪಕ್ಷದಲ್ಲಿನ ಶೀತಲ ಸಮರದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಬಗ್ಗೆ ಹೈಕಮಾಂಡ್ಗೆ ಅನುಮಾನ ಬಂದಿದೆ. ಇದರ ಜತೆ ಕೇಳಿ ಬಂದ ಒಂದಿಷ್ಟು ಆರೋಪಗಳಿಂದ ನಿರಾಣಿಗೆ ಹಿನ್ನಡೆಯಾಗಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಂಬಲ ಸಿಗದ ಕಾರಣ ಹೈಕಮಾಂಡ್ ಬೊಮ್ಮಾಯಿಗೆ ಮಣೆ ಹಾಕಿತು.
ಬೆಲ್ಲದ್ಗೆ ಸಿಎಂ ಕುರ್ಚಿ ಕೈತಪ್ಪಿದ್ಹೇಗೆ?: ಅರವಿಂದ್ ಬೆಲ್ಲದ್ ಅವರಿಗೆ ಮಾಸ್ ಇಮೇಜ್ ಇಲ್ಲ. ಬೆಲ್ಲದ್ ಪರವಾಗಿ ಬಿಎಸ್ವೈ ಆಸಕ್ತಿ ತೋರಿಸಿರಲಿಲ್ಲ. ಕ್ಲೀನ್ ಇಮೇಜ್ ಇದ್ದರೂ ಅವರಿಗೆ ಅನುಭವದ ಕೊರತೆಯಿದೆ. ಹಿರಿಯರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ತಾರೆ ಎಂಬ ಪ್ರಶ್ನೆ ಎದ್ದಿತ್ತು. ಹೀಗಾಗಿ ಸದ್ಯಕ್ಕೆ ಬೇಡ, ಮುಂದಿನ ದಿನಗಳಲ್ಲಿ ಅವಕಾಶ ಕೊಡಬಹುದು ಎಂಬ ಆಲೋಚನೆ ಮಾಡಿದ ಹೈಕಮಾಂಡ್ ಬೊಮ್ಮಾಯಿ ಅವರನ್ನೇ ಅಂತಿಮಗೊಳಿಸಿದೆ.