ಇಸ್ಲಮಾಬಾದ್: ವಿಶ್ವದ ಅತಿ ಡೇಂಜರಸ್ ಉಗ್ರ ಸಂಘಟನೆಯಲ್ಲೊಂದಾದ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಾಲಿಬಾನ್ ಎಂಬುದು ಯಾವುದೇ ಮಿಲಿಟರಿ ಸಂಘಟನೆಯಲ್ಲ, ಅವರೂ ನಮ್ಮಂತೆ ಸಾಮಾನ್ಯ ನಾಗರಿಕರು. ಅವರನ್ನು ಪಾಕಿಸ್ತಾನ ಹೊಡೆದುರುಳಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ತಾಲಿಬಾನ್ ಉಗ್ರರ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಫ್ಘಾನಿಸ್ತಾನದ ಗಡಿಯಲ್ಲಿ ಸೇನೆ ಮತ್ತು ತಾಲಿಬಾನ್ ನಡುವಿನ ಸಂಘರ್ಷ ಇನ್ನೂ ನಿಂತಿಲ್ಲ. ತಾಲಿಬಾನ್ನ ದಾಳಿಯಿಂದ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಪಾಕ್ ಪ್ರಧಾನಿ ಹೇಳಿಕೆ ಜನರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಪಿಬಿಎಸ್ ನ್ಯೂಸ್ ಜೊತೆಗೆ ನಡೆದ ದೀರ್ಘ ಸಂದರ್ಶನದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಿಸಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್, ಅಫ್ಘಾನಿಸ್ತಾನದ ವಿರುದ್ಧ ದಾಳಿ ನಡೆಸಲು ತಾಲಿಬಾನ್ಗೆ ಪಾಕಿಸ್ತಾನ ಶಸ್ತ್ರಾಸ್ತ್ರ, ಹಣಕಾಸಿನ ಸಹಾಯ ನೀಡಿ, ಆಶ್ರಯ ನೀಡುತ್ತಿದೆ ಎಂಬ ಆರೋಪ ನಿರಾಧಾರ ಎಂದಿದ್ದಾರೆ.
ನಾವು ತಾಲಿಬಾನ್ ಉಗ್ರರಿಗೆ ಆಶ್ರಯ ನೀಡುತ್ತಿದ್ದೇವೆ ಎಂಬುದಕ್ಕೆ ಯಾರಾದರೂ ಸಾಕ್ಷಿ ನೀಡಲು ಸಿದ್ಧರಿದ್ದಾರಾ? ವಿನಾಕಾರಣ ನಮ್ಮ ದೇಶದ ಮೇಲೆ ಆರೋಪ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪಾಕಿಸ್ತಾನದ ಗಡಿಯಲ್ಲಿ 3 ಮಿಲಿಯನ್ ಅಫ್ಘಾನಿಸ್ತಾನದ ಬಂದ ನಿರಾಶ್ರಿತರಿದ್ದಾರೆ. ಹೀಗಿರುವಾಗ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಪಾಕಿಸ್ತಾನದ ಗಡಿಯಲ್ಲಿರುವ 3 ಮಿಲಿಯನ್ ಅಫ್ಘಾನಿಸ್ತಾನದ ವಲಸಿಗರ ಪೈಕಿ ಬಹುತೇಕರು ಪಶ್ತೂನ್ ಸಮುದಾಯದವರಾಗಿದ್ದಾರೆ. ತಾಲಿಬಾನ್ ಸಂಘಟನೆಯಲ್ಲಿ ಇರುವವರೂ ಅದೇ ಸಮುದಾಯದವರಾಗಿದ್ದಾರೆ.
ತಾಲಿಬಾನ್ ಅನ್ನು ಒಂದು ಉಗ್ರ ಸಂಘಟನೆಯಂತೆ ಮಾತ್ರ ನೋಡಲಾಗುತ್ತಿದೆ. ಆದರೆ, ತಾಲಿಬಾನಿಗರಲ್ಲಿ ಅನೇಕರು ಸಾಮಾನ್ಯ ಜನರೂ ಇದ್ದಾರೆ. ಅವರನ್ನು ನಾವು ಹೊಡೆದುರುಳಿಸುವುದು ಸರಿಯೇ? ಅವರನ್ನು ಹೇಗೆ ಆತಂಕವಾದಿಗಳ ಪಟ್ಟಿಗೆ ಸೇರಿಸಲು ಸಾಧ್ಯ? ಅದು ತಪ್ಪಲ್ಲವೇ? ಎಂದು ಇಮ್ರಾನ್ ಖಾನ್ ಕೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.