ಗರ್ಭಾವಸ್ಥೆಯಲ್ಲಿಯೇ ಪೌಷ್ಟಿಕ ಆಹಾರ ನೀಡಿ : ನ್ಯಾ.ಹೇಮಲತಾ ಸಲಹೆ
ಬಾಗಲಕೋಟೆ : ಗರ್ಭಾವಸ್ಥೆಯಲ್ಲಿಯೇ ಪೌಷ್ಟಿಕ ಆಹಾರ ನೀಡಿದಾಗ ಮಾತ್ರ ಹುಟ್ಟುವ ಮಗು ಆರೋಗ್ಯವಂತವಾಗಿ ಬೆಳೆದು, ದೇಶದ ಆಸ್ತಿಯಾಗಲು ಸಾಧ್ಯವೆಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಹೇಮಲತಾ ಹುಲ್ಲೂರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪೋಷಣ್ ಮಾಸಾಚರಣೆ ಹಾಗೂ ಮಾತೃವಂದನಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಜೀವಯೋಪಾಯಕ್ಕಾಗಿ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ತಮ್ಮ ಒಡಲಿಂದ ಹುಟ್ಟುವ ಮಗುವಿನ ವಿಶೇಷ ಕಾಳಜಿ ವಹಿಸದೇ ಇದ್ದುದರಿಂದ ಅಪೌಷ್ಟಿಕ ಹಾಗೂ ಬಾಲಗ್ರಹ ಪೀಡಿತ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಪೋಷಣ ಅಭಿಯಾನ ಮತ್ತು ಮಾತೃವಂದನಾ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿದೆ ಎಂದರು.
ಆರೋಗ್ಯವಂತ ಮಗು ಹುಟ್ಟಿದಾಗ ಮಾತ್ರ ಉತ್ತಮ ಬೆಳೆವಣಿಗೆ ಸಾಧ್ಯವಾಗುತ್ತದೆ. ಉತ್ತಮ ಬೆಳೆವಣಿಗೆಯಿಂದ ದೈಹಿಕವಾಗಿ, ಮಾನಸಿಕವಾಗಿ ಬೆಳೆದು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಈ ದೃಷ್ಠಿಯಿಂದ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಅಂದಾಗ ಮಾತ್ರ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಕಡಿಮೆ ಸಾದ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಅಂಗನವಾಡಿಗಳಲ್ಲಿ 0-6 ವರ್ಷದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಅಪೌಷ್ಟಿಕ ಕೊರತೆ ಇರುವ ಮಕ್ಕಳು ಸಹ ದಾಖಲಾಗುತ್ತಿದ್ದು, ಅಂತಹ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ.
ಅವುಗಳ ಸಮರ್ಪಕ ಅನುಷ್ಠಾನಗೊಳಿಸಿ ಅಪೌಷ್ಟಿಕತೆಯನ್ನು ಸೊನ್ನೆಗೆ ತರಲು ಅಧಿಕಾರಿಗಳು ಶ್ರಮಿಸಬೇಕು. ಮಾತೃವಂದನಾ ಯೋಜನೆಯಡಿ ಕಳೆದ 3 ವರ್ಷಗಳಲ್ಲಿ 21 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅಂಗನವಾಡಿಗೆ ದಾಖಲಾಗುತ್ತಿರುವ ಕೆಲವು ಮಕ್ಕಳಲ್ಲಿ ಅಪೌಷ್ಠಿಕತೆ ಕಂಡುಬರುತ್ತಿದ್ದು, ಇದನ್ನು ಕಡಿಮೆ ಮಾಡಲು ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ನೀಡಿದಾಗ ಉತ್ತಮ ಮಗು ಹುಟ್ಟಲು ಸಾಧ್ಯವಾಗುತ್ತದೆ.
ಅಂಗನವಾಡಿ ಕೇಂದ್ರಗಳಲ್ಲಿ ವಿಲೇಜ ಹೆಲ್ತ ನೂರ್ಟಿಶಿಯನ್ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದ ಅವರು ಪೌಷ್ಠಿಕ ಆಹಾರ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ 5 ಜನ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯತು.
ಮಕ್ಕಳಿಗೆ ಆರೋಗ್ಯ ಪಾಶನ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ ಸೂಳಿಕೇರಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ರಾಯಚೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಭವನದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ ತಲಾ ಒಂದು ಗಿಡಗಳನ್ನು ನೆಟ್ಟು ನೀರುಣಿಸಿದರು.
ನಂತರ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪೌಷ್ಠಿಕ ಆಹಾರ ಪ್ರದರ್ಶನ ವೀಕ್ಷಿಸಿ, ಸಹಿ ಸಂಗ್ರಹ ಕ್ಯಾಂಪ್‍ನೆಗ ಚಾಲನೆ ನೀಡಿ, ಸೆಲ್ಪಿ ಪಾಯಿಂಟ್‍ನಲ್ಲಿ ಸೆಲ್ಪಿ ತೆಗೆಸಿಕೊಂಡರು.