ಮುಳುಗುವ ಹಡಗಿನ ಸಹವಾಸ ನಿಮಗೇಕೆ: ಬಿಜೆಪಿ ವರಿಷ್ಠರಿಗೆ ಟಾಂಗ್‌ಕೊಟ್ಟ ಜೆಡಿಎಸ್ ಮುಖಂಡ ರೇವಣ್ಣ
ಹಾಸನ: ಜೆಡಿಎಸ್ ಮುಳುಗುವ ಹಡಗು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿರುವಾಗ ನಮ್ಮ ಜತೆ ಹೊಂದಾಣಿಕೆ ಮಾಡಿಕೊಂಡರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರ್ಚಿಗೆ ಧಕ್ಕೆ ಬರಲಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಮಾರ್ಮಿಕವಾಗಿ ಹೇಳಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡು ಮಹಾನಗರ ಪಾಲಿಕೆಗಳಲ್ಲಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅವರು, ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ಹರಿಹಾಯ್ದಿದ್ದಾರೆ.
ಜೆಡಿಎಸ್ ಮುಳುಗುವ ಹಡಗು ಎಂದು ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಹೀಗಾಗಿ ಜೆಡಿಎಸ್ ಜೊತೆ ಹೊಂದಾಣಿಕೆಯಂತಹ ಸಾಹಸಕ್ಕೆ ಕೈಹಾಕಿ ಮುಖ್ಯಮಂತ್ರಿಗಳು ತಮ್ಮ ಕುರ್ಚಿಗೆ ಕುತ್ತು ತಂದುಕೊಳ್ಳಬೇಡಿ. ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಬೇಡ, ಇನ್ನೂ ಎರಡು ವರ್ಷ ನೀವೆ ಸಿಎಂ ಆಗಿ ಇರಬೇಕು. ನೀವು ಹೊಂದಾಣಿಕೆ ಮಾಡಿಕೊಳ್ಳಲು ಹೋಗಿ ತೊಂದರೆ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಜೆಡಿಎಷ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಅರುಣ್ ಸಿಂಗ್ ಹೇಳಿದ್ದನ್ನು ಸಿ.ಎಂ ಪಾಲಿಸಲಿ. ಹಡಗು ಮುಳುಗಿದರೆ ನಮ್ಮ ಬಳಿ ಸಬ್ ಮೆರಿನ್ ಇದೆ. ಪಕ್ಷ ಉಳಿಸಿಕೊಳ್ಳುವುದು ಗೊತ್ತು’ ಎಂದು ಟಾಂಗ್ ನೀಡಿದ್ದಾರೆ.