ಸೆಪ್ಟೆಂಬರ್ ಕೊನೆಯಾಗುತ್ತ ಬಂದರೂ ಸಾರಿಗೆ ನೌಕರರಿಗೆ ಇನ್ನೂ ಸಿಕ್ಕಿಲ್ಲ ಆಗಸ್ಟ್ ತಿಂಗಳ ಅರ್ಧ ವೇತನ
ಬೆಂಗಳೂರು: ಆಗಸ್ಟ್ ತಿಂಗಳ ವೇತನದಲ್ಲಿ ಅರ್ಧ ವೇತನವನ್ನು ನೀಡಿ ಕೈ ಕಟ್ಟಿಕುಳಿತಿರುವ ಸರ್ಕಾರ ಮತ್ತು ಸಾರಿಗೆ ಸಂಸ್ಥೆ ಇದುವರೆಗೂ ಉಳಿದರ್ಧ ವೇತನ ನೀಡುವಲ್ಲಿ ವಿಳಂಬಧೋರಣೆ ಅನುಸರಿಸುತ್ತಿದೆ.
ಹೌದು ಕಳೆದ ಜುಲೈ ತಿಂಗಳಿನಲ್ಲಿ ವೇತನ ನೀಡದಿದ್ದರಿಂದ ನೌಕರರು ವರಮಹಾಲಕ್ಷ್ಮೀ ಹಬ್ಬ ಆಚರಣೆಗೆ ತೊಂದರೆ ಅನುಭವಿಸಬೇಕಾಯಿತು. ನಂತರ ಸಚಿವರು ಗಣೇಶ ಹಬ್ಬಕ್ಕೂ ಮುನ್ನ ಜುಲೈ ಮತ್ತು ಆಗಸ್ಟ್ ಈ ಎರಡೂ ತಿಂಗಳುಗಳ ವೇತನವನ್ನು ಒಟ್ಟಿಗೆ ಹಾಕುತ್ತೇವೆ ಎಂದು ಹೇಳಿದರು.
ಆದರೆ ಆಗಸ್ಟ್ ಕೊನೆಯಲ್ಲಿ ಜುಲೈ ತಿಂಗಳ ವೇತನ ನೀಡಿದರು. ನಂತರ ಆಗಸ್ಟ್ ತಿಂಗಳ ವೇತನದಲ್ಲಿ ಅರ್ಧ ವೇತನವನ್ನು ಗಣೇಶ ಹಬ್ಬಕ್ಕೂ ಮುನ್ನ ನೌಕರರ ಬ್ಯಾಂಕ್ ಖಾತೆಗಳಿಗೆ ಹಾಕಿದ್ದರು. ಆ ಬಳಿಕ ಅಂದರೆ ಈವರೆಗೂ ಉಳಿದರ್ಧ ವೇತನ ಬಿಡುಗಡೆ ಮಾಡಿಲ್ಲ.
ಹೀಗಾಗಿ ಮತ್ತೆ ನೌಕರರು ವೇತನ ಬರದಿರುವುದರಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ವೇತನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಈ ಸಂಬಂಧ ಸಾರಿಗೆ ಅಧಿಕಾರಿಯೊಬ್ಬರು ಮಾತನಾಡಿದ್ದು, ಈಗ ಅಧಿವೇಶನ ನಡೆಯುತ್ತಿರುವುದರಿಂದ ಸಚಿವರು ಮತ್ತು ಮುಖ್ಯಮಂತ್ರಿಗಳು ಅತ್ತ ಬಿಸಿಯಾಗಿರುವುದರಿಂದ ನಮ್ಮ ವೇತನದ ಬಗ್ಗೆ ಇನ್ನು ಯಾವುದೇ ಹಣ ಬಿಡುಗಡೆ ಮಾಡಿಲ್ಲ, ಅಧಿವೇಶನ ಮುಗಿದ ಬಳಿಕ ವೇತನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ ಕೊನೆಯವಾರದಲ್ಲಿ ನಾವು ಇದ್ದೇವೆ ಇನ್ನು ಈ ತಿಂಗಳ ವೇತನವನ್ನು ಅಕ್ಟೋಬರ್ 10ರೊಳಗೆ ನೌಕರರಿಗೆ ನೀಡಬೇಕು. ಆದರೆ, ಆಗಸ್ಟ್ ತಿಂಗಳ ವೇತನದಲ್ಲೇ ಅರ್ಧ ವೇತನವನ್ನು ಇನ್ನೂ ನೀಡಿಲ್ಲ. ಮತ್ತೆ ಸೆಪ್ಟೆಂಬರ್ ವೇತನವನ್ನು ಯಾವಾಗ ನೀಡುವರೋ ಎಂಬ ಗೊಂದಲದಲ್ಲಿ ನೌಕರರು ದಿನ ದೂಡುತ್ತಿದ್ದಾರೆ.