ಬೆಳಗಾವಿ: ಕಬ್ಬಿನ ಗದ್ದೆಯಲ್ಲಿ ಹೆಣ್ಣು ಮಗುವೊಂದು ಸಿಕ್ಕಿದ್ದು ಈ ಪುಟ್ಟ ಕಂದಮ್ಮನ ಹಿಂದಿನ ಕರುಣಾಜನಕ ಕಥೆ ಬಯಲಾಗಿದೆ. ಎರಡು ವರ್ಷದ ಮಗುವಿನ ಮೇಲೆ ಆದ ಘೋರ ದುರಂತ ಬೆಚ್ಚಿ ಬೀಳಿಸುವಂತಿದೆ.
ಸೆಪ್ಟೆಂಬರ್ 24ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಹೊರ ವಲಯದ ರಸ್ತೆ ಪಕ್ಕದ ಕಬ್ಬಿನ ಗದ್ದೆಯಲ್ಲಿ ಹೆಣ್ಣು ಮಗುವೊಂದು ಸಿಕ್ಕಿತ್ತು. ಹೆಣ್ಣು ಮಗುವನ್ನು ದುಷ್ಕರ್ಮಿಗಳು ಗದ್ದೆಯಲ್ಲಿ ಬಿಸಾಡಿ ಹೋಗಿದ್ದರು.
ವಾಹನ ಸವಾರರು ಮತ್ತು ಸ್ಥಳೀಯರು ಬಿದ್ದಿದ್ದ ಮಗು ನೋಡಿ ರಕ್ಷಣೆ ಮಾಡಿದ್ದರು. ಕೂಡಲೇ ಅಥಣಿ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಆರೋಗ್ಯ ಇಲಾಖೆಗೂ ತಿಳಿಸಿ ಮಗುವಿನ ಜೀವ ಉಳಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಗದ್ದೆಯಲ್ಲಿ ಬಿದ್ದ ಮಗುವನ್ನು ಆಂಬುಲೆನ್ಸ್ ಮೂಲಕ ಅಥಣಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದರು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹೆಣ್ಣು ಮಗುವಿಗೆ ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಜೀವ ಕಾಪಾಡಲಾಗಿತ್ತು. ಮಗುವಿನ ದೇಹದಲ್ಲಿ ಸುಟ್ಟ ಗಾಯ ಕಂಡು ಆಸ್ಪತ್ರೆ ಸಿಬ್ಬಂದಿ ಶಾಕ್ ಆಗಿದ್ರು. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದ್ದು ಜಿಲ್ಲಾಸ್ಪತ್ರೆ ಸಿಬ್ಬಂದಿ ಮಗುವಿನ ಆರೈಕೆ ಮಾಡುತ್ತಿದ್ದಾರೆ.
ಮಗುವಿನ ದೇಹದ ಮೇಲೆ ಸುಟ್ಟ ಗಾಯ: ಇನ್ನು ಗದ್ದೆಯಲ್ಲಿ ಸಿಕ್ಕ ಮಗುವಿನ ದೇಹದ ಮೇಲಿರುವ ಸುಟ್ಟ ಗಾಯಗಳು ಅನುಮಾನ ಹುಟ್ಟಿಸಿವೆ. ಎರಡು ವರ್ಷದ ಹೆಣ್ಣು ಮಗುವಿನ ಮರ್ಮಾಂಗದಿಂದ ಹಿಡಿದು ಕತ್ತಿನವರೆಗೂ ಗೇರು ಬೀಜದಿಂದ ಸುಟ್ಟಿರುವ ಗಾಯಗಳಾಗಿವೆ.
ಬೆನ್ನಿನ ಭಾಗದಲ್ಲೂ ಗೇರು ಬೀಜವಿಟ್ಟು ಸುಟ್ಟಿದ್ದಾರೆ. ದುಷ್ಕರ್ಮಿಗಳು ಹುಣ್ಣಿಮೆ ಹಿಂದಿನ ದಿನವೇ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ದೇಹದಲ್ಲಿನ ಸುಟ್ಟ ಗುರುತುಗಳು ವಾಮಾಚಾರಕ್ಕೆ ಬಾಲಕಿ ಬಳಕೆಯಾಗಿರುವುದನ್ನು ಎತ್ತಿ ಹಿಡಿದಂತಿವೆ.
ಹೀಗಾಗಿ ವಾಮಾಚಾರ ಮಾಡಿ ಮಗು ಬಲಿ ಕೊಡಲು ಯತ್ನಿಸಿದ್ರಾ ಪಾಪಿಗಳು? ಎಂಬ ಪ್ರಶ್ನೆ ಎದ್ದಿದೆ. ಬಲಿ ಕೊಡುವ ಸಂದರ್ಭದಲ್ಲಿ ಯಾರೋ ಬಂದಿದ್ದಕ್ಕೆ ಅರ್ಧಕ್ಕೆ ಮುಗಿಸಿ ಮಗು ಎಸೆದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ IPC ಸಕ್ಷನ್ 317, 307, ಪೋಸ್ಕೋ ಆ್ಯಕ್ಟ್ 6 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಗು ಗುರುತು ಪತ್ತೆಗೆ ಅಥಣಿ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು ನಾಲ್ಕು ದಿನ ಕಳೆದ್ರೂ ಮಗುವಿನ ಗುರುತು ಪತ್ತೆಯಾಗಿಲ್ಲ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದ ಪೊಲೀಸರಿಗೂ ಬಾಲಕಿ ಕುರಿತು ಮಾಹಿತಿ ರವಾನೆ ಮಾಡಲಾಗಿದೆ.
ಪೊಲೀಸ್ ತನಿಖೆಗೆ ಸಹಕರಿಸಿ: ಸೆ.24 ರಂದು ಹಲ್ಯಾಳ ಗ್ರಾಮದ ಹೊರವಲಯದಲ್ಲಿ ಎರಡು ವರ್ಷದ ಮಗು ನಿತ್ರಾಣಗೊಂಡ ಮತ್ತು ದೇಹದ ಮೇಲೆ ಹಲವೆಡೆ ಸುಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸದ್ಯ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಆ ಮಗುವನ್ನು ಹೋಲುವ ಮತ್ತೊಂದು ಮಗುವನ್ನು ದುಷ್ಕರ್ಮಿಗಳು ಅಮಾನವೀಯವಾಗಿ ಥಳಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೀಗಾಗಿ ಮಗು ಮತ್ತು ಪೋಷಕರ ಬಗ್ಗೆ ಮಾಹಿತಿ ಇರುವವರು ಕೂಡಲೇ ಬೆಳಗಾವಿ ಜಿಲ್ಲಾ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.
ಕುಮಾರ್ ಹಾಡಕಾರ- ಅಥಣಿ ಪಿಎಸ್ಐ-9480804062, ಸಿಪಿಐ ಶಂಕರಗೌಡ ಬಸನಗೌಡರ-9448338826, ಡಿವೈಎಸ್ಪಿ- ಎಸ್.ವಿ. ಗಿರೀಶ್-9480804122, ಎಸ್ಪಿ – ಲಕ್ಷ್ಮಣ ನಿಂಬರಗಿ-9480804001 ಅವರನ್ನು ಫೋನ್ ಮೂಲಕ ಸಂಪರ್ಕಿಸಬಹುದಾಗಿದೆ.