ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್ನಲ್ಲಿ ಸಾರಿಗೆ ನೌಕರರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರದ ವೇಳೆ ಅಮಾನತುಗೊಂಡಿದ್ದ ಬಿಎಂಟಿಸಿಯ 57 ನೌಕರರನ್ನು ಮಂಗಳವಾರ (ಸೆ.28) ವಜಾ ಮಾಡಿ ಆದೇಶ ಹೊರಡಿಸಲಾಗಿದೆ.
ಅನಿರ್ದಿಷ್ಟಾವಧಿ ಮುಷ್ಕರದ ವೇಳೆ ಬಿಎಂಟಿಸಿಯ ನೂರಾರು ನೌಕರರ ವಿರುದ್ಧ ಎಫ್ಐಆರ್ ಪ್ರಕರಣ ದಾಖಲಾಗಿತ್ತು. ಈ ವೇಳೆ ಎಫ್ಐಆರ್ ದಾಖಲಾಗಿದ್ದ ಕೆಲವು ನೌಕರರನ್ನು ಕೂಡಲೇ ವಜಾ ಮಾಡಿ ಇನ್ನು ಕೆಲವರನ್ನು ಅಮಾನತಿನಲ್ಲಿ ಇಡಲಾಗಿತ್ತು. ಈಗ ಆ ಅಮಾನತಿನಲ್ಲಿದ್ದ 57 ನೌಕರರನ್ನು ವಜಾ ಮಾಡಿ ಬಿಎಂಟಿಸಿಯ ಆಡಳಿತ ವರ್ಗ ಆದೇಶ ಹೊರಡಿಸಿದೆ.
ಮುಷ್ಕರದ ವೇಳೆ ಸಂಸ್ಥೆಗೆ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಈ ನೌಕರರ ವಿರುದ್ಧ ಆಡಳಿತಾತ್ಮಕವಾಗಿ ಕ್ರಮ ಜರುಗಿಸಲಾಗಿದೆ. ಅಲ್ಲದೆ ಈ ಬಗ್ಗೆ 10 ದಿನದೊಳಗೆ ವರದಿ ನೀಡುವಂತೆ ಸಾರಿಗೆ ಸಚಿವರು ನಮಗೆ ಆದೇಶ ಮಾಡಿದ್ದರಿಂದ ನಾವು ಅವರಿಗೆ ವರದಿ ನೀಡಲಿದ್ದೇವೆ ಎಂದು ಬಿಎಂಟಿಸಿಯ ಭದ್ರತಾ ಮತ್ತು ಜಾಗ್ರತಾ ವಿಭಾಗದ (S&V) ನಿರ್ದೇಶಕ ಡಾ. ಅರುಣ್ ತಿಳಿಸಿದ್ದಾರೆ.
ಈಗಾಗಲೇ ಮುಷ್ಕರಲ್ಲಿ ಭಾಗಿಯಾಗಿದ್ದ 7 ಸಾವಿರ ನೌಕರರಿಗೆ ಚಾರ್ಜ್ಶೀಟ್ಕೊಟ್ಟು ಅವರಿಂದ ದಂಡ ವಸೂಲಿ ಮಾಡಿದ್ದೇವೆ. ಹೀಗಾಗಿ ಬಿಎಂಟಿಸಿಯಲ್ಲಿ ಒಟ್ಟಾರೆ ಶೇ.99ರಷ್ಟು ಪ್ರಕರಣಗಳು ಇತ್ಯರ್ಥವಾದಂತಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಪೊಲೀಸ್ ಪ್ರಕರಣ ದಾಖಲಾಗಿದ್ದು, ವಜಾಗೊಂಡಿರುವ ನೌಕರರ ಬಗ್ಗೆ ಸರ್ಕಾರ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತದೋ ಆ ನಿಟ್ಟಿನಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು. ಇಲ್ಲ ಈಗಾಗಲೇ ಕೋರ್ಟ್ನಲ್ಲಿ ಪ್ರಕರಣಗಳಿರುವುದರಿಂದ ಕೋರ್ಟ್ ಯಾವು ತೀರ್ಪು ನೀಡುತ್ತದೆಯೋ ಅದಕ್ಕೆ ಆಡಳಿತ ವರ್ಗ ಬದ್ಧವಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ನಾವು ಈ ಹಿಂದೆ ಎಫ್ಐಆರ್ ಆದವರಲ್ಲಿ ಕೆಲವರನ್ನು ವಜಾಮಾಡಿದ್ದೆವು, ಇನ್ನು ಕೆಲವರು ಅಮಾನತಿನಲ್ಲಿದ್ದರು. ಆದರೆ ಪ್ರಾಥಮಿಕ ವಿಚಾರಣೆ ಅನ್ವಯ ಅವರನ್ನು ಈಗ ವಜಾ ಮಾಡಲಾಗಿದೆ. ಈ ಮೂಲಕ ನಾವು ಎಲ್ಲ ನೌಕರರನ್ನು ಒಂದೆ ರೀತಿ ನೋಡಿದ್ದೇವೆ ಒಬ್ಬರಿಗೊಂದು ಮತ್ತೊಬ್ಬರಿಗೊಂದು ಎಂಬುದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಬಿಎಂಟಿಸಿ ಆಡಳಿತ ವರ್ಗ ಏನು ತೀರ್ಮಾನ ತೆಗೆದುಕೊಳ್ಳಬೇಕೊ ಅದನ್ನು ನೀವು ತೆಗೆದುಕೊಳ್ಳಿ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಚಿವರ ಶ್ರೀರಾಮುಲು ಅವರು ಹೇಳಿದ್ದರು. ಜತೆಗೆ ನೀವು ತೆಗೆದುಕೊಂಡ ತೀರ್ಮಾನದ ಬಗ್ಗೆ 10 ದಿನದೊಳಗೆ ನನಗೆ ವರದಿ ಕೊಡಿ ಎಂದು ಸೂಚನೆ ನೀಡಿದ್ದರು. ಅದಂತೆ ನಾವು ಈಗ ಶೆ.99 ರಷ್ಟು ಎಲ್ಲವನ್ನು ಕ್ಲಿಯರ್ ಮಾಡಿ ಸಚಿವರಿಗೆ ವರದಿ ಕೊಡುತ್ತಿದ್ದೇವೆ ಎಂದು ಡಾ.ಅರಣ್ ತಿಳಿಸಿದ್ದಾರೆ.
ಇನ್ನು ಅಧಿಕಾರಿಗಳ ಅಂಗಳದಲ್ಲಿದ್ದ ಚೆಂಡು ಈಗ ಸರ್ಕಾರದ ಅಂಗಳ ತಲುಪಿದ್ದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರ ಮೇಲೆ ಸಾರಿಗೆ ನೌಕರರ ಭವಿಷ್ಯ ನಿಂತಿದೆ.
ಈಗ ಸಚಿವ ಶ್ರೀರಾಮುಲು ಅವರ ನಡೆ ಪ್ರಮುಖವಾಗಿದ್ದು ಸಾರಿಗೆ ನೌಕರರಿಗೆ ಸಿಹಿ ಸುದ್ದಿ ನೀಡುವರೋ ಇಲ್ಲಿ ಕಹಿ ಹಂಚುವರೋ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.